ಆಕ್ಷೇಪಣೆ ಜೊತೆ ವೈಜ್ಞಾನಿಕ ವರದಿಯನ್ನೂ ನೀಡಿ: ಹೋರಾಟಗಾರ ಹೊಲದಗದ್ದೆ ಗಿರೀಶ್
ಚಿಕ್ಕಮಗಳೂರು: ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ತಿಳಿಸಿದೆ. ಇದರ ಜೊತೆಗೆ ಕೇರಳಂ ರಾಜ್ಯದ ಮಾದರಿಯಲ್ಲಿಯೇ ವೈಜ್ಞಾನಿಕ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಹೊಲದಗದ್ದೆ ಗಿರೀಶ್ ಒತ್ತಾಯಿಸಿದ್ದಾರೆ.
ಕೇವಲ ಆಕ್ಷೇಪಣೆಯನ್ನು ಸಲ್ಲಿಸಿದರೆ ಮತ್ತೆ ಇನ್ನೊಂದು ಕರಡು ಅಧಿಸೂಚನೆ ಹೊರಡಿಸಲಾಗುತ್ತದೆ. ಹಿಂದಿನ ಎಲ್ಲಾ ಕರಡು ಅಧಿಸೂಚನೆಗಳನ್ನು ಗಮನಿಸಿದಾಗ ಯಾವುದೇ ತಿದ್ದುಪಡಿ ಇಲ್ಲದೆ ಮತ್ತೆ ಅದೇ ಅಧಿಸೂಚನೆ ಪ್ರಕಟಗೊಂಡಿವೆ. ಹೀಗಾಗಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಇರುವ ಅರಣ್ಯ ಪ್ರದೇಶ, ಜನ ವಸತಿ, ಜಲಮೂಲಗಳು ಹಾಗೂ ಕೃಷಿ ಪ್ರದೇಶ ಎಲ್ಲಿವೆ ಎಂಬ ವೈಜ್ಞಾನಿಕ ವರದಿಯನ್ನು ಸಿದ್ಧಪಡಿಸಿ ಆಕ್ಷೇಪಣೆಯೊಂದಿಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಕೇರಳಂ ಸರ್ಕಾರ ವೈಜ್ಞಾನಿಕ ವರದಿ ಸಲ್ಲಿಸಿದ ಕಾರಣ ಆ ರಾಜ್ಯದಲ್ಲಿನ ಕೆಲ ಭೂಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶದ ಕರಡು ಅಧಿಸೂಚನೆಯಲ್ಲಿ ಕೈ ಬಿಡಲಾಗಿದೆ. ಕರಡು ಅಧಿಸೂಚನೆಯಲ್ಲಿ ರಾಜ್ಯದ ಪಶ್ಚಿಮಘಟ್ಟ ವ್ಯಾಪ್ತಿಯ ನೂರಾರು ಹಳ್ಳಿಗಳು, ಕೃಷಿ ಭೂಮಿ ಸೇರ್ಪಡೆಗೊಂಡಿವೆ. ಈ ಎಲ್ಲಾ ಮಾಹಿತಿ ಒಳಗೊಂಡ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-126-1628085646