
ತುಂಗಭದ್ರಾ ಅಣೆಕಟ್ಟು | ನೀರು ಸೋರಿಕೆ ಇಲ್ಲ: ಅಧಿಕಾರಿಗಳ ಸ್ಪಷ್ಟನೆ
ಹೊಸಪೇಟೆ (ವಿಜಯನಗರ): ‘ತುಂಗಭದ್ರಾ ಅಣೆಕಟ್ಟೆಗೆ ಅಳವಡಿಸಲಾದ 33 ಕ್ರೆಸ್ಟ್‌ಗೇಟ್‌ಗಳಲ್ಲಿ ಯಾವುದೇ ಸ್ವರೂಪದಲ್ಲಿ ನೀರಿನ ಸೋರಿಕೆಯಾಗಿಲ್ಲ. ಬೆಡ್ ಕಾಂಕ್ರೀಟ್ ಮಟ್ಟದಲ್ಲಿ ಕ್ರೆಸ್ಟ್‌ಗೇಟ್ ಅಳವಡಿಕೆ ಆಗಿದ್ದು, ಸದ್ಯ ನೀರು ಆ ಮಟ್ಟದಿಂದ 11 ಅಡಿ ಮೇಲಿದೆ’ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
‘ಕ್ರೆಸ್ಟ್‌ಗೇಟ್ ತಜ್ಞ ಕನ್ಹಯ್ಯ ನಾಯ್ಡು ಅವರು ಸಿದ್ಧಪಡಿಸಿದ ವಿನ್ಯಾಸ ಮತ್ತು ಅದಕ್ಕೆ ತಕ್ಕಂತೆ ಗುತ್ತಿಗೆದಾರರು ನಡೆಸಿದ ಗೇಟ್ ಕೆಲಸಗಳು ಪರಿಪೂರ್ಣವಾಗಿ ನಡೆದಿವೆ ಎಂಬುದಕ್ಕೆ ಇದು ನಿದರ್ಶನ. ಜಲಾಶಯದಲ್ಲಿ ನೀರು ನಿಧಾನಕ್ಕೆ ಏರಿಕೆಯಾಗುತ್ತಿದ್ದು, ಉತ್ತಮವಾಗಿ ಮಳೆಯಾದರೆ ಈ ಬಾರಿ ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹ ಸಾಧ್ಯವಾಗಲಿದೆ’ ಎಂದು ತುಂಗಭದ್ರಾ ಮಂಡಳಿಯ ಅಧೀಕ್ಷಕ ಎಂಜಿನಿಯರ್ ನಾರಾಯಣ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕ್ರೆಸ್ಟ್‌ಗೇಟ್ ಮತ್ತು ಬೆಡ್‌ಕಾಂಕ್ರೀಟ್ ನಡುವಿನ ರಬ್ಬರ್, ವಾಷರ್‌ಗಳ ಜೋಡಣೆ ಸಮರ್ಪಕವಾಗಿದ್ದರೆ ನೀರು ಸೋರಿಕೆ ಆಗುವುದಿಲ್ಲ. ಸದ್ಯಕ್ಕೆ ಎಲ್ಲಾ ಕ್ರೆಸ್ಟ್‌ಗೇಟ್‌ಗಳು ಚೆನ್ನಾಗಿದ್ದು, ಯಾವುದೇ ಸಮಸ್ಯೆಯಿಲ್ಲ’ ಎಂದರು.
ಹೊಸ ಕ್ರೆಸ್ಟ್‌ಗೇಟ್ ಅಳವಡಿಕೆ ನಂತರ ಮೊದಲ ಬಾರಿಗೆ ಜಲಾಶಯದ ನೀರು ಗೇಟ್‌ಗಳಿಗೆ ತಲುಪಿದೆ. ಹೀಗಾಗಿ ಎಂಜಿನಿಯರ್‌ಗಳು ಗೇಟ್ ಸಾಮರ್ಥ್ಯ, ಸೋರಿಕೆ ಮೊದಲಾದ ಅಂಶಗಳ ಮೇಲೆ ನಿರಂತರ ನಿಗಾ ಇರಿಸಿದ್ದು, ಶನಿವಾರವೂ ಕೂಲಂಕಷ ಪರಿಶೀಲನೆ ನಡೆಸಿದ್ದರು. ಗೇಟ್‌ಗಳು ಪರಿಪೂರ್ಣವಾಗಿ ಕೆಲಸ ಮಾಡುತ್ತಿವೆ ಎಂಬುದು ದೃಢಪಟ್ಟ ಮೇರೆಗೆ ಮಾಧ್ಯಮಗಳಿಗೆ ಫೋಟೊ, ವಿಡಿಯೊ ಕಳುಹಿಸಿಕೊಟ್ಟರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-37-1990473038