
ಯಶ್ ನಟನೆಯ ಟಾಕ್ಸಿಕ್ ಸಿನಿಮಾಗೆ ಸಿಕ್ತು ‘ಎ’ ಪ್ರಮಾಣ ಪತ್ರ
ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಚಿತ್ರವಾದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ಆಗಸ್ಟ್ 26ರಂದು ವಿಶ್ವದಾದ್ಯಂದ ಚಿತ್ರಮಂದಿರಗಳಲ್ಲಿ ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಕಾಣಲಿದೆ.
ಗೀತು ಮೋಹನ್ ದಾಸ್ ಅವರ ನಿರ್ದೇಶನದಲ್ಲಿ ‘ಟಾಕ್ಸಿಕ್’ ಸಿನಿಮಾ ಮೂಡಿಬಂದಿದೆ. ಬಿಡುಗಡೆಗೂ ಮುನ್ನ ಈ ಸಿನಿಮಾಗೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಎಸ್) 'ಎ' ಪ್ರಮಾಣಪತ್ರವನ್ನು ನೀಡಿದೆ.
ಬೆಂಗಳೂರಿನಲ್ಲಿರುವ ಪ್ರಾದೇಶಿಕ ಕಚೇರಿಯಲ್ಲಿ ಆಗಸ್ಟ್ 13 ರಂದು ಸಿನಿಮಾವನ್ನು ಪರಿಶೀಲಿಸಿ ಪ್ರಮಾಣೀಕರಿಸಲಾಗಿದೆ. ಈ ಸಿನಿಮಾ ಒಟ್ಟು 194 ನಿಮಿಷ, 12 ಸೆಕೆಂಡುಗಳಿಂದ ಕೂಡಿದೆ ಎಂದು ಮಂಡಳಿಯು ದೃಢಪಡಿಸಿದೆ.
1940 ರಿಂದ 1970ರ ದಶಕದ ವಿಂಟೇಜ್ ಗೋವಾದ ಹಿನ್ನೆಲೆಯಲ್ಲಿ ಸಿನಿಮಾದ ಕಥೆ ಸಾಗುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ, ಗೋವಾ ಇನ್ನು ಪೋರ್ಚುಗೀಸರ ಆಡಳಿತದ ನೆರಳಿನಲ್ಲಿರುವ ಕಾಲಘಟ್ಟವನ್ನಿಟ್ಟುಕೊಂಡು ಕಥೆಯನ್ನು ಕಟ್ಟಿಕೊಡಲಾಗಿದೆ. ಕರಾವಳಿಯ ಈ ಪ್ರದೇಶದಲ್ಲಿ ವಸಾಹತುಶಾಹಿ ಆಡಳಿತದ ಪತನದ ಸಮಯ ಮತ್ತು ಕ್ರೈಂ ಸಿಂಡಿಕೇಟ್‌ಗಳ ಉಗಮದ ಕಥೆಗಳ ಸುತ್ತು ಚಿತ್ರಕಥೆ ಸುತ್ತುತ್ತದೆ.
ಸಿನಿಮಾದ ಪ್ರಮುಖ ಪಾತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಸೇರಿದಂತೆ ಇತರರು ನಟಿಸಿದ್ದಾರೆ.