ಬೆಂಗಳೂರಲ್ಲಿ ಬಂಧಿತ ಅಸ್ಫುಲ್‌ ಉಗ್ರ ಸಂಘಟನೆಗೆ ಹಣ ವರ್ಗಾಯಿಸಿರುವುದು ಪತ್ತೆ

ಬೆಂಗಳೂರಲ್ಲಿ ಬಂಧಿತ ಅಸ್ಫುಲ್‌ ಉಗ್ರ ಸಂಘಟನೆಗೆ ಹಣ ವರ್ಗಾಯಿಸಿರುವುದು ಪತ್ತೆ

ಬೆಂಗಳೂರಲ್ಲಿ ಬಂಧಿತ ಅಸ್ಫುಲ್‌ ಉಗ್ರ ಸಂಘಟನೆಗೆ ಹಣ ವರ್ಗಾಯಿಸಿರುವುದು ಪತ್ತೆ

ಬೆಂಗಳೂರು: ದೇಶದ ವಿವಿಧ ಸ್ಥಳಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಆರೋಪದಡಿ ನಗರದಲ್ಲಿ ಬಂಧನಕ್ಕೆ ಒಳಗಾಗಿರುವ ಅಸ್ಫುಲ್‌ ಮಲ್ಲಿಕ್‌ (25), ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ಒದಗಿಸಿರುವುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.

‘ಪಾಕಿಸ್ತಾನದ ಸೇನೆಯ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಸಂಚು ರೂಪಿಸಿದ್ದೆ’ ಎಂದು,  ಪಶ್ಚಿಮ ಬಂಗಾಳ ಉತ್ತರ ಪರಗಣ ಜಿಲ್ಲೆಯ ನೂಪುರ ಗ್ರಾಮಕ್ಕೆ ಸೇರಿದ ಈ ಶಂಕಿತ ಉಗ್ರ ಹೇಳುತ್ತಿದ್ದಾನೆ. ಆದರೆ, ತೆಹ್ರೀಕ್‌– ಎ– ತಾಲಿಬಾನ್‌ ಪಾಕಿಸ್ತಾನ್‌ (ಟಿಟಿಪಿ) ಉಗ್ರ ಸಂಘಟನೆಯೊಂದಿಗೆ ಸೇರಿ, ಬೆಂಗಳೂರು ಒಳಗೊಂಡು ದೇಶದ ವಿವಿಧೆಡೆ ದಾಳಿ ನಡೆಸಲು ಈತ ಹೊಂಚು ಹಾಕಿದ್ದ ಎಂಬ ಸಂಗತಿಯೂ ತನಿಖೆಯಿಂದ ಪತ್ತೆಯಾಗಿದೆ’ ಎಂದು ಮೂಲಗಳು ಹೇಳಿವೆ.

ಜಿಗಣಿಯ ಕೈಗಾರಿಕಾ ಪ್ರದೇಶದಲ್ಲಿ ಇರುವ ಟಾಟಾ ಅಡ್ವಾನ್ಸ್ ಲಿಮಿಟೆಡ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಈ ಶಂಕಿತ ಕೆಲಸ ಮಾಡುತ್ತಿದ್ದ. ಜಿಗಣಿಯ ಎಪಿಸಿ ವೃತ್ತದ ಬಳಿಯ ಪ್ರಕಾಶ್‌ ಕಟ್ಟಡದಲ್ಲಿ ನೆಲಸಿದ್ದ. ಈತನ ಜತೆಗೆ ಮತ್ತೊಬ್ಬ ವಾಸವಿದ್ದ. ಆತ ತಲೆಮರೆಸಿಕೊಂಡಿದ್ದು, ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಶಂಕಿತನ ಬಂಧನವಾದ ಮೇಲೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ. ಪ್ರಾಥಮಿಕ ತನಿಖೆಯ ಮಾಹಿತಿ ನೀಡಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ 10 ದಿನ ಪೊಲೀಸರ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

‘ನಾಲ್ಕು ವರ್ಷದ ಹಿಂದೆಯೂ ಅಸ್ಫುಲ್‌ ಮಲ್ಲಿಕ್‌ ಬೆಂಗಳೂರಿಗೆ ಬಂದಿದ್ದ. ಪಶ್ಚಿಮ ಬಂಗಾಳಕ್ಕೆ ವಾಪಸಾಗಿದ್ದ ಈತ, ಕೆಲವು ತಿಂಗಳ ಹಿಂದೆ ಮತ್ತೆ ನಗರಕ್ಕೆ ಬಂದು ಜಿಗಣಿ ಭಾಗದಲ್ಲಿ ಓಡಾಡುತ್ತಿದ್ದ. ಟಿಟಿಪಿ ಸೇರಿ ಕೆಲವು ಉಗ್ರ ಸಂಘಟನೆಗಳಿಗೆ ಹಣವನ್ನೂ ವರ್ಗಾವಣೆ ಮಾಡಿದ್ದ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಟಿಟಿಪಿ ಸದಸ್ಯ, ಅಫ್ಗಾನಿಸ್ತಾನದ ಇಮ್ರಾನ್‌ ಹೈದರ್‌ನನ್ನು ಅಸ್ಫುಲ್‌ ಪರಿಚಯಿಸಿಕೊಂಡಿದ್ದ. ಆತನ, ಸಂಪರ್ಕದಿಂದಲೇ ಆ ದೇಶಕ್ಕೆ ತೆರಳಿ ಅಲ್ಲಿ ಉಗ್ರ ಚಟುವಟಿಕೆಯ ಬಗ್ಗೆ ತರಬೇತಿ ಪಡೆಯುವುದಕ್ಕೆ ಸಂಚು ರೂಪಿಸಿದ್ದ. ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ ಶಂಕಿತ, ವೀಸಾ ಪಡೆಯಲು ಪ್ರಯತ್ನಿಸಿದ್ದ.

ಪಾಕಿಸ್ತಾನ ಸೇನೆ ಹಾಗೂ ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇಮ್ರಾನ್‌ ಹೈದರ್ ಹಾಗೂ ಕೆಲವು ಉಗ್ರರ ಜತೆಗೆ ಮಾತುಕತೆ ನಡೆಸಿರುವ ಆಡಿಯೊಗಳು, ಚಾಟಿಂಗ್‌ಗಳೂ ಸಿಕ್ಕಿವೆ. ಉಗ್ರ ಚಟುವಟಿಕೆಗೆ ಸಂಬಂಧಿಸಿದ ವಿಚಾರಧಾರೆಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದ. ಎಲ್ಲ ಸ್ಕ್ರೀನ್‌ಶಾಟ್‌ಗಳನ್ನು ಜಪ್ತಿ ಮಾಡಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ತರಬೇತಿಯ ಬಳಿಕ ಭಾರತದ ವಿವಿಧೆಡೆ ದಾಳಿ ನಡೆಸುವುದು ಶಂಕಿತ ಉಗ್ರನ ಯೋಜನೆ ಆಗಿತ್ತು. ಆತ ವಿದೇಶಕ್ಕೆ ತೆರಳುವುದಕ್ಕೆ ಮುನ್ನವೇ ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಟೆಕ್ನಿಕಲ್‌ ಸೆಲ್‌ಗೆ ರವಾನೆ

‘ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ ನಡುವಿನ ಯುದ್ಧದಲ್ಲಿ ಇಸ್ರೇಲ್‌ ಪರವಾಗಿ ಪಾಕಿಸ್ತಾನ ಸೇನೆ ಸಹಾಯ ಮಾಡುತ್ತಿದೆ. ಪ್ಯಾಲೆಸ್ಟೀನ್‌ನವರಿಗೆ ಪಾಕಿಸ್ತಾನವು ನೆರವು ನೀಡಿಲ್ಲ ಎಂಬ ಕಾರಣಕ್ಕಾಗಿ ಶಂಕಿತ ಕೋಪಗೊಂಡಿದ್ದ. ಅದಕ್ಕಾಗಿ ಪಾಕಿಸ್ತಾನದ ಸೇನೆ ಮೇಲೂ ಪ್ರತೀಕಾರ ತೀರಿಸಿಕೊಳ್ಳಲು ಬಯಸಿದ್ದ. ಇನ್ನು ಕೆಲವು ದೇಶಗಳ ಮೇಲೂ ದಾಳಿಗೆ ಬಯಸಿದ್ದ. ಆತನ ವಾಯ್ಸ್ ಕಾಲ್ ಆಡಿಯೊ ರೆಕಾರ್ಡ್‌ನಲ್ಲಿ ಕೆಲವು ಸಂಗತಿಗಳು ದಾಖಲಾಗಿವೆ. ಮೊಬೈಲ್‌ ಅನ್ನು ಟೆಕ್ನಿಕಲ್‌ ಸೆಲ್‌ಗೆ ರವಾನಿಸಿ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

‘ಹೆಬ್ಬಗೋಡಿ ಠಾಣೆಯ ಇನ್‌ಸ್ಪೆಕ್ಟರ್‌ ಜಿ.ಸೋಮಶೇಖರ್ ನೇತೃತ್ವದ ತಂಡವು ಸಾಮಾಜಿಕ ಜಾಲತಾಣಗಳ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಅಸ್ಫುಲ್‌ ಮಲ್ಲಿಕ್‌ ಚಾಟಿಂಗ್‌ ನಡೆಸಿರುವುದು ಪತ್ತೆ ಆಗಿತ್ತು. ಆತನ ಚಲನವಲನ ಗಮನಿಸಿ ಬಂಧಿಸಲಾಯಿತು’ ಎಂದು ಮೂಲಗಳು ಹೇಳಿವೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ