
ಕಿಮ್ ಜಾಂಗ್ ನನ್ನೊಂದಿಗೆ ಅತ್ಯಂತ ಗೌರವದಿಂದ ನಡೆದುಕೊಂಡಿದ್ದಾರೆ: ಟ್ರಂಪ್
ವಾಷಿಂಗ್ಟನ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮೊಂದಿಗೆ ಯಾವಾಗಲೂ ‘ಅತ್ಯಂತ ಗೌರವ'ದಿಂದ ನಡೆದುಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಉತ್ತರ ಕೊರಿಯಾದೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಂಡಿರುವುದಾಗಿಯೂ ಟ್ರಂಪ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ತಾವು ಕಿಮ್ ಜಾಂಗ್ ಉನ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದು, ಇಬ್ಬರ ನಡುವೆ ಉತ್ತಮ ತಿಳಿವಳಿಕೆ ಇದೆ’ ಎಂದಿದ್ದಾರೆ.
‘ಕಿಮ್ ನನ್ನನ್ನು ಗೌರವದಿಂದ ಕಂಡಿದ್ದಾರೆ. ನಾವು ಎರಡು ಬಾರಿ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದೇವೆ. ನನಗೆ ಅವರ ಉದ್ದೇಶ ಅರ್ಥವಾಗುತ್ತದೆ, ಅವರಿಗೆ ನನ್ನ ನಿಲುವು ತಿಳಿಯುತ್ತದೆ. ಅವರಿಗೆ ಜೋ ಬೈಡನ್, ಬರಾಕ್ ಒಮಾಮಾ ಅಥವಾ ಬೇರೆ ಯಾರನ್ನೂ ಇಷ್ಟವಿಲ್ಲ. ಆದರೆ ನನ್ನೊಂದಿಗೆ ಉತ್ತಮವಾಗಿ ಹೊಂದಿಕೊಂಡು ಹೋಗುತ್ತಾರೆ’ ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ ದಕ್ಷಿಣ ಕೊರಿಯಾ ಜೊತೆ ಅಮೆರಿಕ ನಡೆಸುವ ಜಂಟಿ ಮಿಲಿಟರಿ ಸಮರಾಭ್ಯಾಸವನ್ನು ಗಣನೀಯವಾಗಿ ಕಡಿತಗೊಳಿಸುವಂತೆ ಟ್ರಂಪ್ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರಿಗೆ ಸೂಚಿಸಿದ್ದಾರೆ.
‘ಉತ್ತರ ಕೊರಿಯಾದ ನಾಯಕ ಕಿಮ್ ಜೊತೆ ನನಗೆ ಉತ್ತಮ ಬಾಂಧವ್ಯವಿದೆ. ಹಾಗಿರುವಾಗ ದಕ್ಷಿಣ ಕೊರಿಯಾ ಜೊತೆ ಅಮೆರಿಕ ದೊಡ್ಡ ಮಟ್ಟದ ಮಿಲಿಟರಿ ಅಭ್ಯಾಸ ನಡೆಸಲು ಒಪ್ಪಿಕೊಂಡಿರುವುದು ನನಗೆ ಸರಿ ಕಾಣಿಸುತ್ತಿಲ್ಲ’ ಎಂದು ಹೇಳಿದ್ದಾರೆ.
ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಅಮೆರಿಕಕ್ಕೆ ನೆರವು ಮಾಡುವಂತೆ ಮಾಡಿದ ಕೋರಿಕೆಯನ್ನು ದಕ್ಷಿಣ ಕೊರಿಯಾ ತಳ್ಳಿ ಹಾಕಿತ್ತು ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ನಮಗೆ ಇರಾನ್ ವಿಷಯದಲ್ಲಿ ಸಹಾಯ ಬೇಕಾಗಿಲ್ಲ. ಆದರೂ ನೀವು ನಮಗೆ ಸಹಾಯ ಮಾಡಲು ಬಯಸುತ್ತೀರಾ ಎಂದು ಕೇಳಿದ್ದೆ. ಆದರೆ ಅದನ್ನು ನಿರಾಕರಿಸಲಾಗಿತ್ತು. ಹಾಗಾಗಿ ದಕ್ಷಿಣ ಕೊರಿಯಾಗೆ ನಾವು ಏಕೆ ಸಹಾಯ ಮಾಡಬೇಕು. ಏಕೆ ಮಿಲಿಯನ್‌ಗಟ್ಟಲೆ ಖರ್ಚು ಮಾಡಬೇಕು' ಎಂದು ಪ್ರಶ್ನಿಸಿದ್ದಾರೆ.