
ಶಿಥಿಲಾವಸ್ಥೆಗೆ ತಲುಪಿದ ಶಾಲೆ: ಜೀವ ಭಯದಲ್ಲೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು
ಚಿಕ್ಕಜಾಜೂರು: ಮುರಿದು ಬೀಳುತ್ತಿರುವ ಮೇಲ್ಚಾವಣಿ, ಮಳೆ ಬಂದರೆ ಸೋರುವ ಕೊಠಡಿಗಳು, ಜೋರಾಗಿ ಗಾಳಿ ಬೀಸಿದರೂ ಶಾಲೆಯ ಮೇಲೆ ಬೀಳಲು ಸಜ್ಜಾಗಿರುವ ಮರದ ಒಣಗಿದ ಕೊಂಬೆಗಳು, ಇದರ ನಡುವೆಯೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು.. ಇದು ಗುಲಗಂಜಿಹಟ್ಟಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ.
ಅಂದಾಜು 1968ರಿಂದ 70ರಲ್ಲಿ ನಿರ್ಮಾಣವಾದ ಈ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಒಟ್ಟು 30 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದು, ಬಿಸಿಯೂಟ ತಯಾರಿಕಾ ಕೊಠಡಿ ಸೇರಿದಂತೆ ಒಟ್ಟು ನಾಲ್ಕು ಕೊಠಡಿಗಳಿವೆ. ಇದರಲ್ಲಿ ಬಿಸಿ ಊಟದ ಕೊಠಡಿ ಸೋರುತ್ತಿದ್ದರೆ, ಮುಖ್ಯಶಿಕ್ಷಕರ ಕೊಠಡಿಯನ್ನು ತರಗತಿಗೆ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿರುವ ಎರಡು ಮಾತ್ರ ಕೊಂಚ ಸುರಕ್ಷಿತವಾಗಿದ್ದು, ಇನ್ನೆರೆಡು ಶಿಥಿಲಾವಸ್ಥೆಗೆ ತಲುಪಿವೆ. ಹಾಗಾಗಿ ವಿದ್ಯಾರ್ಥಿಗಳು ಜೀವ ಭಯದಲ್ಲೇ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.
‘ಶಾಲೆಯ ಸುತ್ತ ಬೃಹತ್ ಗಾತ್ರದ ಮರಗಳಿದ್ದು, ಇವುಗಳ ಒಣಗಿದ ಕೊಂಬೆಗಳು ಗಾಳಿ ಬೀಸಿದರೆ ಮೇಲ್ಚಾವಣಿಯ ಮೇಲೆ ಬೀಳುತ್ತವೆ. ಇದರಿಂದಾಗಿ, ಮೇಲ್ಚಾವಣಿಗೆ ಹಾಕಿರುವ ಹೆಂಚುಗಳು ಶಾಲಾ ಕೊಠಡಿಯೊಳಗೆ ಮುರಿದು ಬಿದ್ದಿವೆ. ಕೊಂಬೆಗಳು ಬೀಳುವ ವೇಳೆ ತರಗತಿ ನಡೆಯುತ್ತಿದ್ದರೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಜೀವಕ್ಕೆ ಯಾರು ಹೊಣೆ? ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
‘ನಮ್ಮ ಗ್ರಾಮ ಗಣಿಭಾದಿತ ಪ್ರದೇಶದ ವ್ಯಾಪ್ತಿಗೆ ಸೇರಿದ್ದರೂ, ಗಣಿ ಕಂಪನಿಗಳಾಗಲಿ, ಶಿಕ್ಷಣ ಇಲಾಖೆಯಾಗಲಿ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಅನಾಹುತ ನಡೆಯುವುದಕ್ಕೂ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು, ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಿಕೊಡಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಪಿ. ಆನಂದ್, ಉಪಾಧ್ಯಕ್ಷ ಉಮೇಶ್, ಸದಸ್ಯರಾದ ಆರ್. ಕಿಶೋರ್‌ಕುಮಾರ್, ಷಣ್ಮುಕನಾಯ್ಕ, ಕುಬೇಂದ್ರಾನಾಯ್ಕ್, ಮುಖಂಡರಾದ ವೆಂಕಟೇಶ್‌ನಾಯ್ಕ್, ಚಂದ್ರನಾಯ್ಕ್ ಮೊದಲಾದವರು ಆಗ್ರಹಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-44-811920281