ವಿಶ್ವದ ಏಳು ಶಿಖರ ಹತ್ತುವ ಗುರಿ, ಧ್ವಜವೇ ಹೆಮ್ಮೆ : ಪ್ರೀತ್ ಅಪ್ಪಯ್ಯ

ವಿಶ್ವದ ಏಳು ಶಿಖರ ಹತ್ತುವ ಗುರಿ, ಧ್ವಜವೇ ಹೆಮ್ಮೆ : ಪ್ರೀತ್ ಅಪ್ಪಯ್ಯ

ವಿಶ್ವದ ಏಳು ಶಿಖರ ಹತ್ತುವ ಗುರಿ, ಧ್ವಜವೇ ಹೆಮ್ಮೆ : ಪ್ರೀತ್ ಅಪ್ಪಯ್ಯ

ಶಿಖರದ ಮೇಲೆ ನಿಂತಿದ್ದರು ಪ್ರೀತ್ ಅಪ್ಪಯ್ಯ. ಸುತ್ತಲೂ ಹಿಮ, ಕೊರೆಯುವ ಚಳಿ. ಕೆಳಗೆ ಕಾಣುತ್ತಿದ್ದದ್ದು ಮೋಡಗಳ ಸಾಗರ. ಅಷ್ಟು ಎತ್ತರಕ್ಕೆ ಏರಿದ ನಂತರ ಕೈಯಲ್ಲಿ ಹಿಡಿದಿದ್ದ ಎರಡು ಧ್ವಜಗಳನ್ನು ಹೊರತೆಗೆದರು. ಒಂದು ರಾಷ್ಟ್ರಧ್ವಜ, ಮತ್ತೊಂದು ನಾಡ ಧ್ವಜ. ಅವು ಗಾಳಿಗೆ ಹಾರಾಡುತ್ತಿದ್ದಂತೆ, ಪರ್ವತದ ತುತ್ತತುದಿಯಲ್ಲಿ ನಿಂತಿದ್ದ ಅವರ ಮುಖದಲ್ಲಿ ಹೆಮ್ಮೆಯ ನಗು.

ಬೆಟ್ಟ ಹತ್ತುವಾಗ ಅನುಭವಿಸಿದ ಆಯಾಸವೆಲ್ಲ ಆ ಕ್ಷಣದಲ್ಲಿ ಮಾಯವಾಗಿತ್ತು.

‘ಪರ್ವತ ಹತ್ತುವಾಗ ಪರ್ವತವೇ ಅತಿದೊಡ್ಡದು ಎನಿಸುತ್ತದೆ. ಪರ್ವತ ಹತ್ತಿದ ಮೇಲೆ ಈ ಪರ್ವತ ಏನೇನೂ ಅಲ್ಲ ಎಂದೆನಿಸುತ್ತದೆ. ಆದರೆ, ಪರ್ವತದ ಮುಂದೆ ನಾವೇನೂ ಅಲ್ಲ’ ಎನ್ನುತ್ತಾರೆ ಪ್ರೀತ್. ಪ್ರತಿಯೊಂದು ಶಿಖರದ ಮೇಲೂ ರಾಷ್ಟ್ರ ಧ್ವಜ ಹಾರಿಸುವಾಗ ಅವರೊಳಗೆ ಮೂಡುವ ಭಾವನೆ ಇದೇ.

ಕೊಡಗು ಜಿಲ್ಲೆಯ ಆನಂದಪುರ ಅಮ್ಮತ್ತಿ ಗ್ರಾಮದ ಪ್ರೀತ್ ಅಪ್ಪಯ್ಯ ಅವರ ಕನಸು ಒಂದೆರಡು ಶಿಖರಗಳಿಗೆ ಸೀಮಿತವಾಗಿಲ್ಲ. ಪ್ರಪಂಚದ ಏಳು ಖಂಡಗಳ ಅತಿ ಎತ್ತರದ ಶಿಖರಗಳನ್ನು ಏರಿ, ಪ್ರತಿಯೊಂದು ಶಿಖರದ ಮೇಲೂ ರಾಷ್ಟ್ರಧ್ವಜ ಮತ್ತು ನಾಡ ಧ್ವಜ ಹಾರಿಸಬೇಕು ಎಂಬುದು ಅವರ ಗುರಿ. ಈಗಾಗಲೇ ಆಫ್ರಿಕಾದ ಮೌಂಟ್ ಕಿಲಿಮಂಜಾರೋ ಮತ್ತು ಯುರೋಪ್‌ನ ಮೌಂಟ್ ಎಲ್ಬ್ರಸ್ ಏರಿರುವ ಅವರು, ಶನಿವಾರ ಸ್ವಾತಂತ್ರ್ಯ ದಿನದಂದು ಆಸ್ಟ್ರೇಲಿಯಾದ ಮೌಂಟ್ ಕೊಸ್ಸಿಯಸ್ಕೊ ಏರಿ ಹೊಸ ಸಾಧನೆ ಮಾಡಿದ್ದಾರೆ.

ಪ್ರೀತ್ ಅವರಿಗೆ ಬೆಟ್ಟ ಹೊಸತಲ್ಲ. ಕೊಡಗಿನ ಗುಡ್ಡಗಾಡು ಪ್ರದೇಶದಲ್ಲಿ ಬಾಲ್ಯ ಕಳೆದ ಅವರು, ಚಿಕ್ಕಂದಿನಿಂದಲೇ ಗುಡ್ಡ, ಬೆಟ್ಟಗಳನ್ನು ಹತ್ತಿಳಿಯುತ್ತಿದ್ದರು. ಆಗ ಅದು ಸಾಹಸ ಎಂಬ ಅರಿವಿರಲಿಲ್ಲ. ದಾರಿಯಲ್ಲಿ ಸಿಕ್ಕ ಬೆಟ್ಟವನ್ನು ಹತ್ತುವುದು, ಮತ್ತೆ ಇಳಿಯುವುದು ಅಷ್ಟೇ. ಕ್ರಮೇಣ ಅದೇ ಹವ್ಯಾಸವಾಯಿತು. ಗುಡ್ಡದಿಂದ ಬೆಟ್ಟ, ಬೆಟ್ಟದಿಂದ ಪರ್ವತದತ್ತ ಅವರ ಹೆಜ್ಜೆ ಸಾಗಿತು.

ಸುಮಾರು ಹತ್ತು ವರ್ಷಗಳ ಹಿಂದೆ ಅವರ ಗಮನ ಹಿಮಾಲಯದತ್ತ ಹರಿಯಿತು. ಮೊದಲಿಗೆ ಮೌಂಟ್ ಬ್ರಿಗು ಲೇಕ್‌ ಏರಿದರು. ನಂತರ ಹಿಮಾಲಯದ ಹಲವು ಶಿಖರಗಳನ್ನು ಹತ್ತಿದರು. ಒಂದೇ ವರ್ಷದಲ್ಲಿ ಮೂರು ಪರ್ವತಗಳನ್ನು ಏರಿದ ಸಂದರ್ಭವೂ ಇದೆ. ಪ್ರತಿವರ್ಷ ಕನಿಷ್ಠ ಒಂದು ಹಿಮಾಲಯದ ಶಿಖರವನ್ನಾದರೂ ಏರಬೇಕು ಎಂಬುದು ಅವರ ರೂಢಿಯಾಗಿದೆ.

ಆದರೆ, ಭಾರತದ ಪರ್ವತಗಳಲ್ಲೇ ನಿಲ್ಲಬೇಕೆಂಬ ಮನಸ್ಸು ಅವರಿಗೆ ಬರಲಿಲ್ಲ.

2023ರಲ್ಲಿ ಆಫ್ರಿಕಾ ಖಂಡದ ಅತಿ ಎತ್ತರದ ಶಿಖರವಾದ ತಾಂಜೇನಿಯಾದ ಮೌಂಟ್ ಕಿಲಿಮಂಜಾರೋ ಏರಿದರು. ಮುಂದಿನ ವರ್ಷ ಯುರೋಪ್‌ನ ಮೌಂಟ್ ಎಲ್ಬ್ರಸ್ ಶಿಖರವನ್ನೇರಿದರು. ಅಲ್ಲಿ ರಾಷ್ಟ್ರಧ್ವಜ ಮತ್ತು ನಾಡ ಧ್ವಜ ಹಾರಿಸಿದರು. ಈಗ ಆಸ್ಟ್ರೇಲಿಯಾದ 2,228 ಮೀಟರ್ ಎತ್ತರದ ಮೌಂಟ್ ಕೊಸ್ಸಿಯಸ್ಕೊ ಏರಿದ್ದಾರೆ.

‘ಮೊದಲ ಬಾರಿ ಪರ್ವತ ಏರಿದಾಗ, ಇನ್ನು ಮುಂದೆ ಪರ್ವತ ಏರುವುದು ಬೇಡ, ಸಾಕಪ್ಪ ಸಾಕು ಎನಿಸಿತ್ತು. ಆದರೆ ವಾಪಸ್ ಬಂದ ಮೇಲೆ ಮತ್ತೆ ಮತ್ತೆ ಪರ್ವತ ನನ್ನನ್ನು ಸೆಳೆಯಿತು. ಹಾಗಾಗಿ ಪ್ರತಿ ವರ್ಷ ಹಿಮಾಲಯದ ಒಂದು ಶಿಖರವನ್ನೇರುತ್ತಿದ್ದೇನೆ’ ಎನ್ನುತ್ತಾರೆ ಅವರು.

ಪರ್ವತದ ಆಕರ್ಷಣೆಯೇ ಹಾಗೆ. ಏರುವ ಮುನ್ನ ಅದು ಎಷ್ಟು ಕಠಿಣ ಎಂಬುದು ಗೊತ್ತಾಗುತ್ತದೆ. ಏರುತ್ತಿದ್ದಂತೆ ದೇಹ ಆಯಾಸಗೊಳ್ಳುತ್ತದೆ. ಕೆಲವೊಮ್ಮೆ ‘ಇಲ್ಲಿಗೆ ಸಾಕು’ ಎನಿಸುತ್ತದೆ. ಆದರೆ ತುತ್ತತುದಿ ತಲುಪಿದ ಕ್ಷಣಕ್ಕೆ ಎಲ್ಲವೂ ಬದಲಾಗುತ್ತದೆ. ಒಂದೇ ಕ್ಷಣದಲ್ಲಿ ಆಯಾಸದ ಜಾಗವನ್ನು ಗೆಲುವಿನ ಸಂಭ್ರಮ ಆವರಿಸುತ್ತದೆ. ಇಳಿದು ಬಂದ ಮೇಲೆ ಮುಂದಿನ ಪರ್ವತದ ಕನಸು ಆರಂಭವಾಗುತ್ತದೆ.

ಪ್ರೀತ್ ಅವರ ಸಾಹಸದಲ್ಲಿ ಇನ್ನೊಂದು ವಿಶೇಷವಿದೆ. ಅವರು ಬಹುತೇಕ ಈ ಶಿಖರಾರೋಹಣಗಳನ್ನು ಏಕಾಂಗಿಯಾಗಿ ಕೈಗೊಳ್ಳುತ್ತಾರೆ. ತಂಡದ ಬೆಂಬಲವಿಲ್ಲದೆ ಒಬ್ಬರೇ ಪರ್ವತದತ್ತ ಹೊರಡುವುದು ಧೈರ್ಯದ ಸಂಗತಿಯಷ್ಟೇ ಅಲ್ಲ, ಅಪಾರ ಮಾನಸಿಕ ಸಿದ್ಧತೆಯನ್ನೂ ಬೇಡುತ್ತದೆ.

ಸಾಹಸಕ್ಕೆ ಒಲವು ಮೂಡಲು ಅವರ ಬಾಲ್ಯದ ವಾತಾವರಣವೂ ಕಾರಣ. ತಂದೆ ಕುಂಞ್ಞಯಂಡ ಅಪ್ಪಯ್ಯ ಸೇನೆಯಲ್ಲಿ ಹಾನರಿ ಕ್ಯಾಪ್ಟನ್ ಆಗಿದ್ದರು. ತಾಯಿ ಗೌರಮ್ಮ ಅವರೊಂದಿಗೆ ಉತ್ತರ ಪ್ರದೇಶದ ಬಬಿನಾದಲ್ಲೂ ಕೆಲ ಕಾಲ ವಾಸವಾಗಿದ್ದರು. ಸೇನಾ ವಾತಾವರಣ, ಶಿಸ್ತು ಮತ್ತು ಸಾಹಸದ ಪರಿಚಯ ಅವರ ಬಾಲ್ಯದ ಭಾಗವಾಗಿತ್ತು.

ಪ್ರೀತ್ ಅವರ ಸಾಧನೆಯ ಮತ್ತೊಂದು ಮುಖ ರೈಫಲ್ ಶೂಟಿಂಗ್. ರಾಷ್ಟ್ರಮಟ್ಟದ ಮಹಿಳೆಯರ ಮಾಸ್ಟರ್ಸ್ ವಿಭಾಗದಲ್ಲಿ ರೈಫಲ್ ಶೂಟಿಂಗ್‌ನಲ್ಲಿ ಎರಡು ಚಿನ್ನದ ಪದಕ ಸೇರಿ ಹಲವು ಪದಕಗಳನ್ನು ಗೆದ್ದಿದ್ದಾರೆ. ಪರ್ವತಾರೋಹಣವಾಗಲಿ, ಶೂಟಿಂಗ್ ಆಗಲಿ–ಏಕಾಗ್ರತೆ, ಶಿಸ್ತು ಮತ್ತು ಗುರಿಯ ಮೇಲಿನ ದೃಢತೆ ಎರಡರಲ್ಲೂ ಅಗತ್ಯ. ಬಹುಶಃ ಈ ಸಾಮ್ಯವೇ ಅವರ ವಿಭಿನ್ನ ಆಸಕ್ತಿಗಳನ್ನು ಒಟ್ಟಿಗೆ ಕೊಂಡೊಯ್ದಿದೆ.

ವಯಸ್ಸು ಸಾಹಸಕ್ಕೆ ಅಡ್ಡಿಯಲ್ಲ ಎನ್ನುವುದು ಅವರ ನಂಬಿಕೆ. ಈಗ ಮೌಂಟ್ ಕೊಸ್ಸಿಯಸ್ಕೊ ಏರಿದ ಬಳಿಕ ಉಳಿದ ಖಂಡಗಳ ಶಿಖರಗಳತ್ತ ಹೆಜ್ಜೆ ಹಾಕಲಿದ್ದಾರೆ. ಕೊನೆಗೆ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರುವುದು ಅವರ ದೊಡ್ಡ ಕನಸು.

ಮೈಸೂರಿನಲ್ಲಿ ಪತಿ ಜಮ್ಮಡ ಅಯ್ಯಣ್ಣ, ಪುತ್ರರಾದ ಪ್ರಥಮ್ ಪೂಣಚ್ಚ ಮತ್ತು ಆರ್ಯನ್ ಕುಟ್ಟಪ್ಪ ಅವರೊಂದಿಗೆ ನೆಲೆಸಿರುವ ಪ್ರೀತ್ ಅವರ ಜೀವನದಲ್ಲಿ ಪರ್ವತಗಳು ಇನ್ನೂ ಮುಗಿದಿಲ್ಲ. ಒಂದು ಶಿಖರದಿಂದ ಮತ್ತೊಂದು ಶಿಖರಕ್ಕೆ ಅವರ ಪಯಣ ಮುಂದುವರಿಯುತ್ತಲೇ ಇದೆ.

ಪ್ರತಿ ಬಾರಿ ಶಿಖರದ ಮೇಲೆ ನಿಂತಾಗ ಅವರ ಕೈಯಲ್ಲಿ ಹಾರುವುದು ಕೇವಲ ಎರಡು ಧ್ವಜಗಳಲ್ಲ. ಬಾಲ್ಯದಿಂದ ಬೆಟ್ಟಗಳತ್ತ ಅವರನ್ನು ಸೆಳೆದ ಆಕರ್ಷಣೆ, ಗೆಲ್ಲಬೇಕು ಎನ್ನುವ ಹಟ, ಪ್ರಕೃತಿಯ ಮುಂದೆ ತಲೆಬಾಗುವ ವಿನಯ ಇವೆಲ್ಲವೂ ಆ ಧ್ವಜಗಳೊಂದಿಗೆ ಗಾಳಿಯಲ್ಲಿ ಹಾರುತ್ತವೆ.

ಕೆಳಗಿಳಿದ ತಕ್ಷಣ ಮತ್ತೆ ಮುಂದಿನ ಪರ್ವತದ ಕನಸು ಕಾಣುವ ಮನಸ್ಸು ಅವರದು.

ಪರ್ವತಗಳು ಮುಗಿಯುವವರೆಗೆ ಈ ಪಯಣವೂ ಮುಗಿಯದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260816-51-1074089644

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ