
ಬಸವಕಲ್ಯಾಣಕ್ಕೆ ಇನ್ನೂ ರೈಲು ಮರೀಚಿಕೆ!
ಬಸವಕಲ್ಯಾಣ: ತಾಲ್ಲೂಕಿಗೆ ಸಮೀಪದ ಮಹಾರಾಷ್ಟ್ರದ ಪಟ್ಟಣಗಳಿಂದ ಕಲಬುರಗಿವರೆಗಿನ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗದ ಸಮೀಕ್ಷಾ ಕಾರ್ಯಕ್ಕೆ ಹಸಿರು ನಿಶಾನೆ ದೊರೆತಿದ್ದರಿಂದ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರವಾದ ಬಸವಕಲ್ಯಾಣದಿಂದ ರೈಲು ಮಾರ್ಗ ನಿರ್ಮಾಣ ಅಸಾಧ್ಯ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈಗಲೇ ಎಚ್ಚೆತ್ತುಕೊಂಡು ಈ ಮಾರ್ಗದಲ್ಲಿ ಕೆಲ ಬದಲಾವಣೆಗೆ ಒಕ್ಕೊರಲಿನಿಂದ ಒತ್ತಾಯಿಸುವುದು ಅತ್ಯಗತ್ಯವಾಗಿದೆ.
ಈಗಾಗಲೇ 32 ಕಿ.ಮೀ ಅಂತರದ ತಾಲ್ಲೂಕಿನ ಪೂರ್ವ ಭಾಗದಲ್ಲಿರುವ ಹುಮನಾಬಾದ್‌ದಿಂದ ಕಲಬುರಗಿಗೆ ರೈಲು ಮಾರ್ಗ ಇದೆ. ಈಗ ಮತ್ತೆ ಪಶ್ಚಿಮದಲ್ಲಿರುವ 35 ಕಿ.ಮೀ ಅಂತರದ ಮಹಾರಾಷ್ಟ್ರದ ಉಮರ್ಗಾದಿಂದ ಕಲಬುರಗಿಗೆ ರೈಲು ಮಾರ್ಗ ಹೋಗಲಿದೆ. ಹೀಗಿದ್ದಾಗ ಬಹುದಿನದ ಬೇಡಿಕೆಯಾದ ಇವೆರಡರ ಮಧ್ಯ ಭಾಗದಲ್ಲಿರುವ ಬಸವಕಲ್ಯಾಣ ನಗರದಿಂದ ಮತ್ತೊಂದು ಹೊಸ ರೈಲು ಮಾರ್ಗ ಸೃಷ್ಟಿಗೆ ತಾಂತ್ರಿಕ ತೊಂದರೆ ಆಗಬಹುದು ಎನ್ನಲಾಗುತ್ತಿದೆ.
ಇಲ್ಲಿ ಹಮ್ಮಿಕೊಂಡಿದ್ದ ಹತ್ತಾರು ಕಾರ್ಯಕ್ರಮಗಳಲ್ಲಿ ಇಲ್ಲಿಂದ ರೈಲು ಸಂಚಾರ ಆರಂಭಿಸಬೇಕು ಎಂಬ ನಿರ್ಣಯಗಳನ್ನು ಮಂಡಿಸಲಾಗಿತ್ತು. ಅನೇಕ ಸಲ ಸಂಬಂಧಿತರಿಗೆ ಮನವಿಪತ್ರಗಳನ್ನು ಸಲ್ಲಿಸಲಾಗಿತ್ತು. ಅದೆಲ್ಲ ನಿಷ್ಪ್ರಯೋಜಕ ಎಂಬ ಭಾವನೆ ಜನರಲ್ಲಿ ಮೂಡಿದೆ.
ಆದರೆ, ಲಾತೂರ, ಔಸಾ, ಲಾಮಜನಾ, ಉಮರ್ಗಾ, ಆಳಂದ ಮೂಲಕ ಕಲಬುರಗಿಗೆ ಹೋಗುವ ಹೊಸ ಮಾರ್ಗದಲ್ಲಿ ಮಾರ್ಪಾಡು ಮಾಡಿ ಬಸವಕಲ್ಯಾಣಕ್ಕೂ ರೈಲು ಬರುವಂತೆ ಮಾಡಬಹುದಾಗಿದೆ. ಔಸಾದಿಂದ ಲಾಮಜನಾ ಬದಲಾಗಿ ಸಮೀಪದಲ್ಲೇ ಇರುವ ತಾಲ್ಲೂಕು ಸ್ಥಳ ನೀಲಂಗಾಕ್ಕೆ ಮಾರ್ಗ ಬದಲಾಯಿಸಿ ಅಲ್ಲಿಂದ ಬಸವಕಲ್ಯಾಣ, ಉಮರ್ಗಾ, ಆಳಂದಕ್ಕೆ ಹೋಗಬಹುದಾಗಿದೆ.
ಈಗಾಗಲೇ ನೀಲಂಗಾ ತಾಲ್ಲೂಕಿನವರು ಪ್ರಸ್ತಾಪಿತ ಮಾರ್ಗಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನೀಲಂಗಾ ಮೂಲಕವೇ ಮಾರ್ಗ ಹೋಗಲಿ ಎನ್ನುತ್ತಿದ್ದಾರೆ. ಅವರೊಟ್ಟಿಗೆ ಕೈಜೋಡಿಸಿದರೆ ಈ ತಾಲ್ಲೂಕಿನವರ ಕನಸು ಕೂಡ ನನಸಾಗುವುದು ನಿಶ್ಚಿತವಾಗಿದೆ.
ಒಂದುವೇಳೆ ಬಸವಕಲ್ಯಾಣದಿಂದ ರೈಲು ಮಾರ್ಗ ಹೋದರೆ ಕೃಷಿ ಉತ್ಪನ್ನದ ದೊಡ್ಡ ಮಾರುಕಟ್ಟೆಗಳಾದ ಲಾತೂರ ಮತ್ತು ಕಲಬುರಗಿಗೆ ಹೋಗಲು ರೈತರಿಗೆ ಅನುಕೂಲವಾಗಿ ವ್ಯಾಪಾರ ವೃದ್ಧಿಸುತ್ತದೆ. ಬಸವಕಲ್ಯಾಣ ನಗರದಿಂದ ಬೆಂಗಳೂರಿಗೆ ಹೋಗುವ ವಿದ್ಯಾರ್ಥಿಗಳ, ನೌಕರಸ್ಥರ ಮತ್ತಿತರರ ಸಂಖ್ಯೆ ಈಚೆಗೆ ಹೆಚ್ಚಿದೆ.
ಪ್ರತಿದಿನ ಇಲ್ಲಿಂದ ಐದು ಖಾಸಗಿ ಬಸ್‌ಗಳು ಬೆಂಗಳೂರಿಗೆ ಸಂಚರಿಸುತ್ತವೆ. ರೈಲು ಆರಂಭವಾದರೆ ಇವರ ತೊಂದರೆ ಕಡಿಮೆ ಆಗಲಿದೆ. ಇದಲ್ಲದೆ ಶರಣ ಸ್ಮಾರಕಗಳ ವೀಕ್ಷಣೆಗೆ ದೂರದೂರದಿಂದ ಬರುವ ಪ್ರವಾಸಿಗರಿಗೆ ನೇರವಾಗಿ ಬಸವಕಲ್ಯಾಣಕ್ಕೆ ತಲುಪಲು ಸಾಧ್ಯವಾಗಲಿದೆ.
ಮಹಾರಾಷ್ಟ್ರದ ಮುಖ್ಯ ಆಯುಕ್ತರಿಗೆ ಪತ್ರ
ಲಾತೂರನ ರೈಲು ಸಲಹೆಗಾರರ ಸಮಿತಿ ಸದಸ್ಯ ಸಂಜಯ ನೀಲೆಗಾಂವಕರ್ ಅವರು ನೂತನ ಮಾರ್ಗದ ರಚನೆಯ ವಿಷಯ ಖಚಿತಪಡಿಸಿದ್ದು, ಕೇಂದ್ರದ ಮಧ್ಯ ರೈಲ್ವೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಭುವನೇಶಕುಮಾರ ಗುಪ್ತಾ ಅವರು ಮಹಾರಾಷ್ಟ್ರದ ಮುಖ್ಯ ಆಯುಕ್ತ ರಾಜೇಶ ಆಗ್ರವಾಲ್ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ ಎಂದಿದ್ದಾರೆ.
ಸೊಲ್ಲಾಪುರದ ರೈಲ್ವೆ ಇಲಾಖೆ ಉಪ ಮುಖ್ಯ ಎಂಜಿನಿಯರ್ ಅವರು ಕಲಬುರಗಿ ಜಿಲ್ಲಾಧಿಕಾರಿಗೂ ಈ ಸಂಬಂಧ ಪತ್ರ ಬರೆದು ಜಮೀನು ಹಸ್ತಾಂತರ ಹಾಗೂ ಇತರೆ ವಿಷಯಗಳ ಬಗ್ಗೆ ಸಹಕಾರಕ್ಕೆ ಕೋರಿದ್ದಾರೆ ಎನ್ನಲಾಗಿದೆ.
ಉಮರ್ಗಾ ಮೂಲಕ ಹೋಗುವ ಹೊಸ ಮಾರ್ಗದ ಒಟ್ಟು ಉದ್ದ 157 ಕಿ.ಮೀ ಆಗಿದ್ದು ₹ 4 ಸಾವಿರ ಕೋಟಿಗೂ ಅಧಿಕ ವೆಚ್ಚವಾಗಲಿದೆ. ಸುರೇಂದ್ರ ಜೈನ್, ಆರ್.ವಿ.ಗುಜರಾಲ್, ಮುಕೇಶ ಲಾಲ್, ವಿ.ಪಿ.ಚೌಧರಿ ನೇತೃತ್ವದಲ್ಲಿ ಸಮೀಕ್ಷಾ ತಂಡ ಕೂಡ ರಚಿಸಲಾಗಿದ್ದು, ಇದು ಶೀಘ್ರ ಕಾರ್ಯಪ್ರವೃತ್ತ ಆಗಲಿದೆ. ಇದಕ್ಕೂ ಮೊದಲು ಮಾರ್ಗದಲ್ಲಿ ಬದಲಾವಣೆಗೆ ಪ್ರಯತ್ನಿಸುವುದು ಅತಿ ಅವಶ್ಯಕವಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260811-33-809690900