ಇನ್ನು ಮಳೆ ಬಂದರೂ ಚೇತರಿಕೆ ಕಾಣದ ಮುಂಗಾರು: ಬೆಳೆ ನಾಶ, ರೈತರಿಗೆ ಅನಿವಾರ್ಯ

ಇನ್ನು ಮಳೆ ಬಂದರೂ ಚೇತರಿಕೆ ಕಾಣದ ಮುಂಗಾರು: ಬೆಳೆ ನಾಶ, ರೈತರಿಗೆ ಅನಿವಾರ್ಯ

ಇನ್ನು ಮಳೆ ಬಂದರೂ ಚೇತರಿಕೆ ಕಾಣದ ಮುಂಗಾರು: ಬೆಳೆ ನಾಶ, ರೈತರಿಗೆ ಅನಿವಾರ್ಯ

ಶಿರಹಟ್ಟಿ: ಸಕಾಲಕ್ಕೆ ಮಳೆಯಾಗಿ, ಉತ್ತಮ ಫಸಲಿನೊಂದಿಗೆ ಆರ್ಥಿಕತೆ ಸುಧಾರಣೆ ಕಾಣಬಹುದೆಂಬ ಬಹುದೊಡ್ಡ ಕನಸು ಕಂಡಿದ್ದ, ತಾಲ್ಲೂಕಿನ ರೈತರು ಇದೀಗ ದಿಗ್ಭ್ರಾಂತರಾಗಿದ್ದಾರೆ. ಬರದ ಬರೆ ಅವರ ನಿದ್ದೆಗೆಡಿಸಿದೆ.

ಸಮರ್ಪಕವಾಗಿ ಮಳೆಯಿಲ್ಲದೆ ಬೆಳೆಗಳು ಬಾಡುತ್ತಿರುವುದು ರೈತರಲ್ಲಿ ಆತಂಕ ಉಂಟುಮಾಡಿದೆ. ಮುಂಗಾರಿನಲ್ಲಿ ಬಿತ್ತನೆಯಾದ ಬೆಳೆಗಳು ತೇವಾಂಶ ಕೊರತೆಯಿಂದ ಒಣಗುತ್ತಿದ್ದು, ಬಹುತೇಕ ರೈತರು ಅವುಗಳನ್ನು ನಾಶಪಡಿಸುತ್ತಿದ್ದಾರೆ. ಸಾಲ ಮಾಡಿ, ತಂದು ಭೂತಾಯಿಯ ಒಡಲೊಳಗೆ ಹಾಕಿದ ಬೀಜಗಳು ಬೆಳೆಯಾಗಿ ಫಸಲು ಕೈಸೇರುವ ಮುನ್ನವೇ ಕಮರುತ್ತಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬಹುತೇಕ ಹಳ್ಳಿಗಳಿಲ್ಲಿ ಬರ: ಪಟ್ಟಣ ಸೇರಿದಂತೆ ತಾಲ್ಲೂಕಿನ ಕೊಂಚಿಗೇರಿ, ನಾಗರಮಡವು, ಮಾಚೇನಹಳ್ಳಿ, ವರವಿ, ಬೆಳ್ಳಟ್ಟಿ, ವಡವಿ-ಹೊಸೂರು, ಬನ್ನಿಕೊಪ್ಪ, ಸುಗನಹಳ್ಳಿ, ಇಟಗಿ, ಹೆಬ್ಬಾಳ, ಮಾಗಡಿ, ಪರಸಾಪುರ ಮೊದಲಾದ ಗ್ರಾಮದಲ್ಲಿ ಮಳೆಯಾಗದೆ ಬೆಳೆಗಳು ಒಣಗುತ್ತಿವೆ. ಕೆಲವು ಭಾಗಗಳಲ್ಲಿ ಮೊಳಕೆಯೊಡೆದ ಬೆಳೆಗಳ ಬೆಳವಣಿಗೆ ತೇವಾಂಶವಿಲ್ಲದೆ ಕುಂಠಿತಗೊಂಡಿದೆ. ಅವುಗಳನ್ನು ನಾಶ ಮಾಡುವುದು ಅನಿವಾರ್ಯವಾಗಿದೆ.

ಬೆಳೆ ನಾಶ: ಬಿತ್ತನೆಯಾಗಿ ನಾಲ್ಕರಿಂದ ಐದು ವಾರ ಕಳೆದಿದೆ. ಹೂ, ಕಾಯಿ ಕಟ್ಟುವ ಹಂತದಲ್ಲಿರುವ ಬೆಳೆಗಳಿಗೆ ಮಳೆಯ ಅವಶ್ಯಕತೆ ಹೆಚ್ಚಾಗಿದೆ. ಆದರೆ, ಮಳೆ ಇಲ್ಲದ ಕಾರಣಕ್ಕೆ ಬೆಳೆದು ನಿಂತ ಶೇಂಗಾ, ಮೆಕ್ಕೆಜೋಳ, ಹೆಸರು, ತೊಗರಿ, ಹತ್ತಿ ಬೆಳೆಗಳು ಸೂರ್ಯನ ಪ್ರಖರತೆಗೆ ಬಾಡುತ್ತಿವೆ. ಹೆಸರು ಬಿತ್ತನೆಯಾಗಿದ್ದ ಹೊಲವನ್ನು ರೈತರು ಸಂಪೂರ್ಣವಾಗಿ ಹರಗಿದ್ದಾರೆ. ಮೆಕ್ಕೆಜೋಳ ಬೆಳೆ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ಬರಗಾಲ ಪೀಡಿತ ತಾಲ್ಲೂಕು: ಕೃಷಿ ಇಲಾಖೆಯ ಮಾಹಿತಿಯಂತೆ ತಾಲ್ಲೂಕಿನಲ್ಲಿ ಶೇ 88ರಷ್ಟು ಬಿತ್ತನೆಯಾಗಿದೆ. ಕಳೆದ ತಿಂಗಳು ಸುರಿದ ಅಲ್ಪ ಮಳೆಗೆ ಬೆಳೆ ಕೇವಲ ಚಿಗುರೊಡೆದಿದ್ದು, ಸದ್ಯ ನೀರಿನಾಂಶ ಇಲ್ಲದೆ ಕಮರಿವೆ. ಅವಧಿ ಮುಗಿದ ನಂತರ ಮಳೆಯಾದರೂ ಪ್ರಯೋಜನವಿಲ್ಲವೆಂದು ಕೆಲವು ರೈತರು ಈಗಾಗಲೇ ಹರಗುತ್ತಿದ್ದಾರೆ. ಹೆಸರು ಬಿತ್ತನೆ ಮಾಡಿದ್ದ ರೈತರು ಕುರಿ ಹಾಗೂ ದನ–ಕರುಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ.

‘ಮಳೆ ಕೈಕೊಟ್ಟಿದ್ದರಿಂದ ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ ತಂದು ಬಿತ್ತನೆ ಮಾಡಿದರೂ ಬೆಳೆ ಬೆಳೆದಿಲ್ಲ. ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲೂ ಇದೇ ಪರಿಸ್ಥಿತಿ ಇದೆ. ಬರಗಾಲದ ಬವಣೆಯಲ್ಲಿ ರೈತರು ಸಿಲುಕಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ, ಅಗತ್ಯ ಸೌಕರ್ಯ ಒದಗಿಸಬೇಕು’ ಎಂಬುದು ರೈತರ ಆಗ್ರಹ.

ತಾಲ್ಲೂಕಿನ್ಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಒಟ್ಟು 36,430 ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಹೊಂದಲಾಗಿತ್ತು. ಜೂನ್ ತಿಂಗಳವರೆಗೆ 10,335 ಹೆಕ್ಟೇರ್ ಬಿತ್ತನೆ ಗುರಿ ಸಾಧಿಸಲಾಗಿದೆ. ಜೂನ್‌ 1ರಿಂದ ಆ. 4ರವರೆಗೆ 194.2 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 143.5 .ಮಿ.ಮೀ ಮಾತ್ರ ಸುರಿದಿದೆ. ಶೇ 26ರಷ್ಟು ಕೊರತೆ ಎದುರಾಗಿದೆ.

ತಾಲ್ಲೂಕಿನಲ್ಲಿ 2,020 ಹೆಕ್ಟೇರ್‌ನಲ್ಲಿ ಹೆಸರು, 27,070 ಹೆಕ್ಟೇರ್–ಮೆಕ್ಕೆಜೋಳ, 1,550 ಹೆಕ್ಟೇರ್‌–ತೊಗರಿ, 625 ಹೆಕ್ಟೇರ್ ಹತ್ತಿ, 755 ಹೆಕ್ಟೇರ್ ಶೇಂಗಾ ಬಿತ್ತನೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-23-510020530

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ