
ಅವಧಿ ಮೀರಿದ ಕಳಪೆ ಗುಣಮಟ್ಟದ ಆಹಾರ ಪತ್ತೆ: ಹೋಟೆಲ್ ಅಡುಗೆ ಕೋಣೆಗೆ ಬೀಗ
* ಕಾರ್ಯಾಚರಣೆಯಲ್ಲಿ 30 ತಂಡಗಳು ಭಾಗಿ * ಹಲವು ಹೋಟೆಲ್‌ಗಳಿಗೆ ನೋಟಿಸ್ ಜಾರಿ * ಪ್ರಕರಣ ದಾಖಲಿಸಲು ಶಿಫಾರಸು
ಬೆಂಗಳೂರು: ನಗರದ ತಾರಾ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು, ಆಹಾರ ಮಾದರಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅವಧಿ ಮೀರಿದ ಕಳಪೆ ಗುಣಮಟ್ಟದ ಆಹಾರ ಪತ್ತೆಯಾದ ಕಾರಣದಿಂದ ಯುಬಿ ಸಿಟಿಯ 16ನೇ ಮಹಡಿಯಲ್ಲಿರುವ ಸ್ಕೈ ಲಾಂಜ್ ಹೋಟೆಲ್ ಹಾಗೂ ಪೆಟ್ಸ್ ಆ್ಯಂಡ್ ಬಾಟೆಲ್ಸ್ ಅಡುಗೆ ಕೋಣೆಗೆ ಬೀಗ ಹಾಕಲಾಗಿದೆ.
ಇಲಾಖೆ ಹಮ್ಮಿಕೊಂಡಿದ್ದ ವಿಶೇಷ ತಪಾಸಣೆ ಕಾರ್ಯಾಚರಣೆ ಭಾಗವಾಗಿ 30 ತಂಡಗಳು ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿವಿಧ ತಾರಾ ಹೋಟೆಲ್‌ಗಳಿಗೆ ಭೇಟಿ ನೀಡಿ, 77 ಆಹಾರದ ಮಾದರಿಗಳನ್ನು ಸಂಗ್ರಹಿಸಿದವು. ಬಳಿಕ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಸ್ಕೈ ಲಾಂಜ್ ಹೋಟೆಲ್‌ನಲ್ಲಿ ಸಂಗ್ರಹಿಸಿದ್ದ ಮಾಂಸವು ಕೊಳೆತಿರುವುದು ಕಂಡು ಬಂದಿದೆ. ಹತ್ತು ದಿನಗಳ ಹಿಂದೆಯೇ ಅವಧಿ ಮುಗಿದಿದ್ದ ಹಾಲು ಮತ್ತು ಮೊಸರು ಸಂಗ್ರಹಿಸಿರುವುದು ಪತ್ತೆಯಾಗಿದೆ. ಅಡುಗೆ ಮನೆಯಲ್ಲಿ ಸ್ವಚ್ಛತೆ ಇರಲಿಲ್ಲ. ಹಾಗಾಗಿ ಹೋಟೆಲ್ ಅಡುಗೆ ಕೋಣೆಗೆ ಬೀಗ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಬಿ ಸಿಟಿಯ ಸ್ಕೈ ಹೋಟೆಲ್, ರಾಯಲ್ ಚೈನ್ ಹೋಟೆಲ್, ಮದ್ರಾಸ್ ಕಿಚನ್, ಟೆಸ್ಕಾನ್ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ, ಆಹಾರದ ಗುಣಮಟ್ಟ, ಸುರಕ್ಷತೆ, ಸಂಗ್ರಹಣೆ, ಲೇಬಲಿಂಗ್ ಹಾಗೂ ಆಹಾರ ನಿರ್ವಹಣಾ ಕ್ರಮಗಳನ್ನು ಪರಿಶೀಲಿಸಲಾಯಿತು.
ತಪಾಸಣೆ ವೇಳೆ ಅವಧಿ ಮೀರಿದ ಆಹಾರ ಉತ್ಪನ್ನಗಳ ಸಂಗ್ರಹಣೆ, ಮಾಂಸ, ಮೀನು ಹಾಗೂ ಕೋಳಿ ಮಾಂಸದ ಅಸಮರ್ಪಕ ಸಂಗ್ರಹಣೆ, ತರಕಾರಿಗಳಲ್ಲಿ ಶಿಲೀಂಧ್ರ, ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ಪದಾರ್ಥಗಳನ್ನು ಪ್ರತ್ಯೇಕಿಸದಿರುವುದು, ಕೃತಕ ಬಣ್ಣಗಳ ಬಳಕೆ ಸೇರಿ ಆಹಾರ ಸುರಕ್ಷತೆಯ ಉಲ್ಲಂಘನೆಗಳು ಕಂಡು ಬಂದಿವೆ.
ಕೋಳಿ, ಮಾಂಸ, ಮೀನು, ಬ್ರೆಡ್, ಅಡುಗೆ ಎಣ್ಣೆ, ತಾಜಾ ಎಣ್ಣೆ, ಮೊಸರು, ಬೇಳೆ, ಕಡಲೆ, ಕೊತ್ತಂಬರಿ, ಚಟ್ನಿ ಸೇರಿ ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ, ಅವುಗಳ ಗುಣಮಟ್ಟ ಮತ್ತು ಆಹಾರ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ದಾಳಿ ವೇಳೆ 132 ಕೆ.ಜಿ. ಆಹಾರ ಜಪ್ತಿ ಮಾಡಿದೆ. ಅವುಗಳಲ್ಲಿ ಕೆಲವನ್ನು ನಾಶ ಪಡಿಸಿದ್ದು, ಕೆಲ ಹೋಟೆಲ್‌ಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಕಾನೂನು ಕ್ರಮಕ್ಕಾಗಿ ಸಂಬಂಧಿಸಿದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಶಿಫಾರಸು ಮಾಡಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿರುವ ಕೆಎಫ್‌ಸಿ, ಮ್ಯಾಕ್ ಡೊನಾಲ್ಡ್, ಸಬ್ ವೇ ಸೇರಿ ವಿವಿಧ ಆಹಾರ ಉದ್ದಿಮೆಗಳಲ್ಲಿ ತಪಾಸಣೆ ನಡೆಸಿ, ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಲಾಗಿದೆ. ಬ್ರಿಗೇಡ್ ರಸ್ತೆಯಲ್ಲಿರುವ ಮ್ಯಾಕ್ ಡೊನಾಲ್ಡ್ ಘಟಕದಲ್ಲಿ ಕರಿದ ಅಡುಗೆ ಎಣ್ಣೆ ಶುದ್ಧೀಕರಣಕ್ಕಾಗಿ ಮೆಗ್ನಿಷಿಯಂ ಸಲ್ಫೇಟ್ ಬಳಸುತ್ತಿದ್ದ ಕಾರಣ ನೋಟಿಸ್ ಜಾರಿ ಮಾಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ಸೌಂದರ್ಯವರ್ಧಕಗಳ ಮಾದರಿ ಸಂಗ್ರಹ
ಕಳಪೆ ನಕಲಿ ಸೌಂದರ್ಯವರ್ಧಕಗಳ ಮಾರಾಟದ ವಿರುದ್ಧ ಸೋಮವಾರ ಕಾರ್ಯಾಚರಣೆ ನಡೆಸಲಾಯಿತು. ಔಷಧ ಪರಿವೀಕ್ಷಕರು (ಡ್ರಗ್ ಇನ್‌ಸ್ಪೆಕ್ಟರ್) ಮತ್ತು ಸಹಾಯಕ ಔಷಧ ನಿಯಂತ್ರಕರು ಹತ್ತು ಕಡೆ ಸೌಂದರ್ಯ ವರ್ಧಕಗಳ ಮಾದರಿಗಳನ್ನು ಸಂಗ್ರಹಿಸಿದರು. ಲಿಪ್‌ಸ್ಟಿಕ್ ಪೌಡರ್ ಸೆರಮ್ ಫೇಷಿಯಲ್ ಕ್ರೀಮ್ ಸೇರಿ 13 ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸೌಂದರ್ಯವರ್ಧಕಗಳನ್ನು ಖರೀದಿಸುವಾಗ ಗುಣಮಟ್ಟ ಲೇಬಲ್ ತಯಾರಿಕೆ ದಿನಾಂಕ ಮತ್ತು ಮುಕ್ತಾಯ ದಿನಾಂಕವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಹಿಂದೆ ದಾಳಿ ನಡೆಸಿದ್ದ ವೇಳೆ ಸುಮಾರು 23 ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದವು.
ಕಠಿಣ ಕ್ರಮ: ಖಾದರ್ ಎಚ್ಚರಿಕೆ
‘ಕಳಪೆ ಗುಣಮಟ್ಟದ ಸೌಂದರ್ಯವರ್ಧಕಗಳ ಮಾರಾಟ ಮಾಡುವವರ’ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಎಚ್ಚರಿಸಿದ್ದಾರೆ. ‘ಅಲ್ಲದೇ ಟ್ಯಾಟೂ ಅಂಗಡಿಗಳಲ್ಲಿ ಸ್ವಚ್ಛತೆ ಮತ್ತು ಸುರಕ್ಷತಾ ಕ್ರಮಗಳ ಕೊರತೆ ಕಂಡು ಬಂದಿದೆ. ಟ್ಯಾಟೂ ಅಂಗಡಿಗಳಲ್ಲಿ ಸೂಜಿಗಳನ್ನು ಬದಲಾಯಿಸದ ಕಾರಣ ವಿವಿಧ ಕಾಯಿಲೆಗಳು ಹರಡುವ ಸಾಧ್ಯತೆಯಿದೆ. ಹಲವೆಡೆ ಸೂಜಿಗಳನ್ನು ಬದಲಾಯಿಸುತ್ತೇವೆ ಎನ್ನುತ್ತಾರೆ. ಆದರೆ ಅವರು ಬಳಸುವ ರಾಸಾಯನಿಕಗಳು? ಬಾಟಲಿಗಳನ್ನೂ ಬದಲಾಯಿಸುತ್ತಾರೆಯೇ ಎಂಬುದು ಖಚಿತವಿಲ್ಲ. ಇವೆಲ್ಲವನ್ನೂ ಪರಿಶೀಲಿಸಬೇಕಿದೆ’ ಎಂದು ಹೇಳಿದರು. ‘ಆಮದು ಮಾಡಿಕೊಳ್ಳುವ ಅಥವಾ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಮಾರಾಟವಾಗುವ ಹಲವು ಚಾಕೊಲೇಟ್‌ಗಳ ಗುಣಮಟ್ಟದಲ್ಲೂ ವ್ಯತ್ಯಾಸವಿದೆ. ವಿದೇಶಗಳಲ್ಲಿ ಗುಣಮಟ್ಟದ ಮಾನದಂಡಗಳು ಕಠಿಣವಾಗಿವೆ. ಕಂಪನಿಗಳು ಇಲ್ಲಿಯೂ ಅದೇ ಗುಣಮಟ್ಟದ ಚಾಕೊಲೇಟ್ ಮಾರಾಟ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕಿದೆ’ ಎಂದರು.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿರುವ ನಡುವೆಯೇ ಲಭ್ಯ ಮಾಹಿತಿಯ ಪ್ರಕಾರ ಮಂಜೂರಾದ ಆಹಾರ ಸುರಕ್ಷತಾ ಅಧಿಕಾರಿ ಹುದ್ದೆಗಳ ಪೈಕಿ ಶೇಕಡ 53ರಷ್ಟು ಖಾಲಿ ಇವೆ. ಒಟ್ಟು 210 ಹುದ್ದೆಗಳು ಮಂಜೂರಾಗಿದ್ದು ಈ ಪೈಕಿ ಕೇವಲ 97 ಅಧಿಕಾರಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 113 ಹುದ್ದೆಗಳು ಖಾಲಿ ಇವೆ. ಆಹಾರ ವಿಶ್ಲೇಷಕರು ಮತ್ತು ಆಹಾರ ನಿರೀಕ್ಷಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇವೆ.