
ಕಾರ್ಯಕ್ರಮಕ್ಕೆ ಸಿಜೆಐಗೆ ಆಹ್ವಾನ: ವಿದ್ಯಾರ್ಥಿಗಳ ಆಕ್ಷೇಪ
ಬೆಂಗಳೂರು: ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) 2026ನೇ ಸಾಲಿನ ಘಟಿಕೋತ್ಸವದ ಅತಿಥಿಯಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ (ಸಿಜೆಐ) ಅವರು ಭಾಗವಹಿಸುವುದಕ್ಕೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್‌ನ ನಲ್ಸಾರ್‌ನ ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಸೂರ್ಯಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಅಲ್ಲಿನ ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಈ ಕಾರಣಕ್ಕೆ, 2026ನೇ ಸಾಲಿನ ವಿದ್ಯಾರ್ಥಿಗಳ ನೋಂದಣಿಗೆ ಭಾರತೀಯ ವಕೀಲರ ಪರಿಷತ್ತು ನಿರ್ಬಂಧ ವಿಧಿಸಿತ್ತು. ಪರಿಷತ್ತಿನ ನಡೆಗೆ ನ್ಯಾಯಾಂಗ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಬಳಿಕ ನಿರ್ಬಂಧ ಹಿಂಪಡೆದಿತ್ತು. ‘ವಿದ್ಯಾರ್ಥಿಗಳು ಮತ್ತು ಬೋಧಕರ ವಿರುದ್ಧ ಕೈಗೊಂಡ ಕ್ರಮ ಸರಿಯಲ್ಲ’ ಎಂದು ಎನ್‌ಎಲ್‌ಎಸ್‌ಐಯು ವಿದ್ಯಾರ್ಥಿಗಳು ಹೇಳಿದ್ದಾರೆ.
‘ನಲ್ಸಾರ್‌ನ ವಿದ್ಯಾರ್ಥಿಗಳು ಮತ್ತು ಬೋಧಕ ಸಮುದಾಯದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ಧಕ್ಕೆ ತರಲು ಯತ್ನಿಸಿರುವುದಕ್ಕಾಗಿ ವಕೀಲರ ಪರಿಷತ್ತು ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಕಾನೂನು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಬೋಧಕರು ಮತ್ತು ಆಡಳಿತ ಮಂಡಳಿಗಳು ಭಯವಿಲ್ಲದೆ ತಮ್ಮ ಆತ್ಮಸಾಕ್ಷಿ ಹಾಗೂ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿ ನಡೆದುಕೊಳ್ಳುವ ವಾತಾವರಣ ಇರಬೇಕು. ಹೊರಗಿನವರ ಪ್ರಭಾವಕ್ಕೆ ಒಳಗಾಗಿ ವಿದ್ಯಾರ್ಥಿಗಳು ದಾರಿ ತಪ್ಪಿದ್ದಾರೆ ಎಂಬ ಹೇಳಿಕೆಯನ್ನೂ ಹಿಂಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.