ಶೃಂಗೇರಿ ಬಸ್ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

ಶೃಂಗೇರಿ ಬಸ್ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

ಶೃಂಗೇರಿ ಬಸ್ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

ಶೃಂಗೇರಿ: ತಾಲ್ಲೂಕು ಕೇಂದ್ರ ಹಾಗೂ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಶೃಂಗೇರಿಯ ರಾಷ್ಟ್ರಕವಿ ಕುವೆಂಪು ಬಸ್ ನಿಲ್ದಾಣವು ಸದ್ಯ ಅವ್ಯವಸ್ಥೆಗಳ ಆಗರವಾಗಿದೆ.

ಇಲ್ಲಿ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ವಿವಿಧ ಮಾರ್ಗಗಳಿಗೆ ತೆರಳುವ ಬಸ್‌ಗಳ ನಿಲುಗಡೆ ಸ್ಥಳದ ಕುರಿತು ಅಳವಡಿಸಿರುವ ಸೂಚನಾ ಫಲಕಗಳು ಮುರಿದು ಹೋಗಿವೆ. ಪ್ರಯಾಣಿಕರು ಕುಳಿತುಕೊಳ್ಳಲು ಇರುವ ಆಸನಗಳು ಮುರಿದು ಮೂಲೆ ಸೇರಿವೆ. ಹೋಟೆಲ್ ಹಾಗೂ ಇತರ ಅಂಗಡಿಗಳ ಚಾವಣಿಯಿಂದ ನೀರು ಸೋರುತ್ತಿದೆ.

ಕುಡಿಯುವ ನೀರಿನ ಟ್ಯಾಂಕ್‌ಗಳಿಗೆ ಮುಚ್ಚಳವಿಲ್ಲದೆ ಕಸಕಡ್ಡಿ ಬಿದ್ದು ನೀರು ಮಲಿನಗೊಂಡಿದೆ. ಪಟ್ಟಣ ಪಂಚಾಯಿತಿ ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಕುಡಿಯುವ ನೀರಿನ ಖಾಲಿ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದಿದ್ದು, ಕಸ ವಿಲೇವಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಮದ್ಯ ಸೇವಿಸಿ ಖಾಲಿ ಬಾಟಲಿಗಳನ್ನು ಬಸ್ ನಿಲ್ದಾಣದ ಆವರಣದಲ್ಲೇ ಎಸೆಯಲಾಗುತ್ತಿದ್ದು, ಆವರಣದ ಸುತ್ತಲೂ ತೆರೆದ ಚರಂಡಿ ಇರುವುದರಿಂದ ಕೊಳಚೆ ನೀರು ತುಂಬಿ ಗಬ್ಬು ವಾಸನೆ ಬೀರುತ್ತಿದೆ.

ನಿಲ್ದಾಣದ ಆವರಣದಲ್ಲಿ ಖಾಸಗಿ ವಾಹನ ಪಾರ್ಕಿಂಗ್ ಮಾಡಬಾರದು ಎಂಬ ಸೂಚನಾ ಫಲಕವಿದ್ದರೂ ಬೈಕ್‌ಗಳನ್ನು ಅಲ್ಲಿಯೇ ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಬಸ್‌ಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ. ನಿಯಮ ಮೀರಿ ವಾಹನ ನಿಲುಗಡೆ ಮಾಡುವವರ ವಿರುದ್ಧ ದಂಡ ವಿಧಿಸಿದರೆ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರಬಹುದು ಎಂಬುದು ಪ್ರಯಾಣಿಕರ ಅಭಿಪ್ರಾಯ.

ಬಸ್ ನಿಲ್ದಾಣದ ಗೋಡೆಗಳ ಬಣ್ಣ ಮಾಸಿದ್ದು, ಮೂಲೆಗಳಲ್ಲಿ ಜೇಡರ ಬಲೆ ಆವರಿಸಿದೆ. ಹಿಂಭಾಗದ ಗೋಡೆಗಳ ಬಳಿ ಕಳೆಗಿಡಗಳು ಬೆಳೆದಿವೆ. ಅವುಗಳನ್ನು ತೆರವುಗೊಳಿಸ ಕಾರಣ ನಿಲ್ದಾಣದ ಅಂದಕ್ಕೂ ಧಕ್ಕೆಯಾಗಿದೆ.

ದೂರದ ಊರುಗಳಿಂದ ಬರುವ ಪ್ರಯಾಣಿಕರು ರಾತ್ರಿ ಉಳಿದುಕೊಳ್ಳಲು ಅನುಕೂಲವಾಗುವಂತೆ ಬಸ್ ನಿಲ್ದಾಣದ ಮೇಲ್ಭಾಗದಲ್ಲಿ ಕೊಠಡಿಗಳನ್ನು ನಿರ್ಮಿಸಿ ಬಾಡಿಗೆ ನೀಡುವ ಉದ್ದೇಶದಿಂದ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಈ ಜಾಗ ಅಕ್ರಮ ಚಟುವಟಿಕೆಗಳಿಗೆ ಅಡ್ಡೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ದೂರದ ಊರುಗಳಿಂದ ಬರುವ ಮಹಿಳೆಯರು ಮತ್ತು ಯುವತಿಯರಿಗೆ ಕುಡುಕರ ಹಾಗೂ ಕಿಡಿಗೇಡಿಗಳ ಹಾವಳಿಯಿಂದ ಅಸುರಕ್ಷತೆ ಎದುರಾಗಿದೆ. ಶೌಚಾಲಯದಲ್ಲಿ ಸ್ವಚ್ಛತೆ ಕೊರತೆಯಿಂದ ದುರ್ವಾಸನೆ ಬೀರುತ್ತಿದ್ದು, ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲೂ ಕಷ್ಟಪಡುವಂತಾಗಿದೆ. ಪುರುಷರ ಶೌಚಾಲಯದ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಗೋಡೆಯ ಪಕ್ಕದಲ್ಲಿ ಕೆಲವರು ಬೀಡಿ, ಸಿಗರೇಟ್ ಸೇದುವುದಲ್ಲದೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

ಬಸ್ ನಿಲ್ದಾಣದ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗಿರುವುದರಿಂದ ವಾಹನಗಳ ಸಂಚಾರ ಹೆಚ್ಚಾಗಿದೆ. ಬಸ್‌ಗಳು ಆವರಣದೊಳಗೆ ಪ್ರವೇಶಿಸುವ ಹಾಗೂ ಹೊರಗೆ ತೆರಳುವ ಸಂದರ್ಭದಲ್ಲಿ ಸ್ಥಳಾವಕಾಶದ ಕೊರತೆಯಿಂದ ಅಪಘಾತದ ಅಪಾಯವೂ ಎದುರಾಗಿದೆ. ದನಕರುಗಳು ನಿಲ್ದಾಣದ ಆವರಣಕ್ಕೆ ಮುಕ್ತವಾಗಿ ಪ್ರವೇಶಿಸುತ್ತಿವೆ.

ಬಸ್ ನಿಲ್ದಾಣದ ಪಕ್ಕದಲ್ಲೇ ವಿದ್ಯುತ್ ಪರಿವರ್ತಕ ಅಳವಡಿಸಿರುವುದು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಆತಂಕ ಮೂಡಿಸಿದೆ. ₹5 ಲಕ್ಷ ವೆಚ್ಚದಲ್ಲಿ ಆವರಣದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪ ಸರಿಯಾಗಿ ಉರಿಯುತ್ತಿಲ್ಲ. ಇದರಿಂದ ರಾತ್ರಿ ವೇಳೆ ಬೆಳಕಿನ ಸಮಸ್ಯೆ ಎದುರಾಗುತ್ತಿದೆ. ಬಸ್ ನಿಲ್ದಾಣದ ಸ್ವಚ್ಛತೆ, ಮೂಲಸೌಲಭ್ಯ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಪ್ರಯಾಣಿಕರು ರಾತ್ರಿ ಬಸ್ ನಿಲ್ದಾಣ ದಲ್ಲಿ ಮಲಗಿದ್ದಾಗ ಕುಡುಕರು ತೊಂದರೆ ಕೊಡುತ್ತಿದ್ರಾರೆ. ಅಂಗಡಿಗಳಿಂದ ಕೊಂಡು ತಂದ ನೀರಿನ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಮಹಿಳೆಯರ ಶೌಚಾಲಯ ಸ್ವಚ್ಛತೆಯಿಂದ ಕೂಡಿಲ್ಲ. ಶೌಚಾಲಯದೊಳಗೆ ಲೈಟ್ ವ್ಯವಸ್ಥೆ ಇಲ್ಲದೇ ಒಳ ಹೋಗಲು ಭಯವಾಗುತ್ತದೆ ಎಂದು ಪ್ರವಾಸಿ ಮಹಿಳೆ ನಿಧಿಶ್ರೀ ಹೇಳಿದರು.

‘ಗೋಡೆಗಳಿಗೆ ಸುಣ್ಣ ಬಣ್ಣವಿಲ್ಲ’

‘ಬಸ್ ನಿಲ್ದಾಣ ನಿರ್ಮಾಣವಾಗಿ 30 ವರ್ಷ ಕಳೆದಿದ್ದರೂ ಗೋಡೆಗಳಿಗೆ ಸುಣ್ಣ ಬಣ್ಣ ಬಳಿದಿಲ್ಲ. ಲಕ್ಷಾಂತರ ವೆಚ್ಚದಲ್ಲಿ ಅಳವಡಿಸಿರುವ ವಿದ್ಯುತ್‌ ದೀಪಗಳು ಉರಿಯುತ್ತಿಲ್ಲ. ಹೋಟೆಲ್, ವಾಣಿಜ್ಯ ಕೊಠಡಿಗಳು, ಶೌಚಾಲಯದ ಒಳಗೆ ಗೋಡೆಗಳಲ್ಲಿ ನೀರು ಸೋರುತ್ತಿದೆ. ಬಸ್ ನಿಲ್ದಾಣದ ಪಕ್ಕದ ಖಾಸಗಿ ಹೋಟೆಲ್, ಮನೆಗಳ ನೀರು ಚರಂಡಿಯಲ್ಲಿ ಹರಿದು ದುರ್ವಾಸನೆ ಬೀರುತ್ತಿದ್ದು, ಸೊಳ್ಳೆ ಕಾಟ ಹೆಚ್ಚಾಗಿದೆ. ಬಸ್ ನಿಲ್ದಾಣದ ಗೋಡೆಗಳ ಮೇಲೆ ಗಿಡಗಳು ಬೆಳೆದಿವೆ’ ಎಂದು ಸ್ಥಳೀಯರಾದ ಜಗದೀಶ್ ಕಣದಮನೆ ಆರೋಪಿಸಿದರು.

₹1 ಕೋಟಿ ಅನುದಾನಕ್ಕೆ ಪ್ರಸ್ತಾವ

‘ಶೃಂಗೇರಿಯ ಕುವೆಂಪು ಬಸ್ ನಿಲ್ದಾಣದ ಅಭಿವೃದ್ಧಿಗೆ ಪಟ್ಟಣ ಪಂಚಾಯಿತಿಯ ನಿಧಿಯಿಂದ ₹25 ಲಕ್ಷ ಅನುದಾನ, ಆಟೊ ನಿಲ್ದಾಣ ಅಭಿವೃದ್ಧಿಗೆ ₹10 ಲಕ್ಷ ಮತ್ತು ₹55 ಲಕ್ಷ ವಿಶೇಷ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ. ಇದು ಶೌಚಾಲಯ, ನಾಮ ಫಲಕ, ಚರಂಡಿ ಅಭಿವೃದ್ಧಿ ಮತ್ತು ಕಟ್ಟಡಕ್ಕೆ ಬಣ್ಣ ನೀಡಲು ಅನುದಾನ ಕೊರತೆಯಾಗುತ್ತದೆ. ಆದ್ದರಿಂದ ನಗರೋತ್ಥಾನ ಯೋಜನೆಯಡಿ ₹1 ಕೋಟಿ ಅನುದಾನ ನೀಡಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಶಾಸಕ ಟಿ.ಡಿ. ರಾಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260818-126-775790430

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ