
ವಾಜಪೇಯಿ ಪುಣ್ಯ ಸ್ಮರಣೆ: ಮೋದಿ, ಮುರ್ಮು ಸೇರಿ ಗಣ್ಯರಿಂದ ಪುಷ್ಪ ನಮನ
ನವದೆಹಲಿ: ಇಂದು ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಸೇರಿದಂತೆ ಹಲವು ಗಣ್ಯರು ವಾಜಪೇಯಿ ಅವರನ್ನು ಸ್ಮರಿಸಿದ್ದಾರೆ. ನವದೆಹಲಿಯ ಸದೈವ್ ಅಟಲ್‌ನಲ್ಲಿರುವ ಅವರ ಸ್ಮಾರಕ ಸ್ಥಳಕ್ಕೆ ತೆರಳಿ ಪುಷ್ಪ ನಮನ ಅರ್ಪಿಸಿದ್ಧಾರೆ.
'ಅಟಲ್ ಜಿ ಅವರ ಪುಣ್ಯತಿಥಿಯಂದು ಅವರನ್ನು ಸ್ಮರಿಸುತ್ತಿದ್ದೇನೆ. ಅದ್ಭುತ ದೂರದೃಷ್ಟಿ ಹೊಂದಿದ್ದ ಅಸಾಧಾರಣ ರಾಜನೀತಿಜ್ಞರಾಗಿದ್ದ ಅವರು, ತಮ್ಮ ಜೀವನವನ್ನು ರಾಷ್ಟ್ರ ಸೇವೆಗೆ ಮುಡಿಪಾಗಿಟ್ಟಿದ್ದರು’ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
‘ವಾಜಪೇಯಿ ಅವರ ಮಾತುಗಳು ಮತ್ತು ಕೆಲಸಗಳು ಅನೇಕ ತಲೆಮಾರುಗಳಿಗೆ ಸ್ಫೂರ್ತಿಯಾಗಿವೆ. ಅವರ ನಾಯಕತ್ವವು ದೇಶವನ್ನು ಬಲಪಡಿಸಿತು. ಉತ್ತಮ ಆಡಳಿತ ಮತ್ತು ಜನಕಲ್ಯಾಣದತ್ತ ಅವರು ನೀಡಿದ ಒತ್ತು ನಮಗೆ ಸದಾ ಮಾರ್ಗದರ್ಶನ ನೀಡುತ್ತಲೇ ಇರುತ್ತದೆ’ಎಂದಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕ 'ಸದೈವ್ ಅಟಲ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪುಷ್ಪ ನಮನ ಸಲ್ಲಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ದೆಹಲಿ ಸಿಎಂ ರೇಖಾ ಗುಪ್ತಾ ಮತ್ತು ಇತರ ಹಿರಿಯ ನಾಯಕರು 'ಸದೈವ್ ಅಟಲ್'ಗೆ ಆಗಮಿಸಿ ನಮನ ಸಲ್ಲಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹ ಅಟಲ್ ಸ್ಮಾರಕಕ್ಕೆ ನಮಿಸಿದರು.