
ಟಿಟಿ: ಪಯಾಸ್, ಸಿಂಡ್ರೆಲಾಗೆ ಪ್ರಶಸ್ತಿ
ಕಾನ್ಪುರ (ಪಿಟಿಐ): ದೆಹಲಿಯ ಪಯಾಸ್ ಜೈನ್ ಮತ್ತು ಪಶ್ಚಿಮ ಬಂಗಾಳದ ಸಿಂಡ್ರೆಲಾ ದಾಸ್ ಅವರು ಇಲ್ಲಿ ಭಾನುವಾರ ಮುಕ್ತಾಯಗೊಂಡ ಯುಟಿಟಿ ರಾಷ್ಟ್ರೀಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಫೈನಲ್‌ನಲ್ಲಿ ಪಯಾಸ್ 4-1 ಅಂತರದಿಂದ ಪಿಎಸ್‌ಪಿಬಿಯ ಮಾನವ್ ಠಕ್ಕರ್ ಅವರನ್ನು ಸೋಲಿಸಿದರೆ, ಸಿಂಡ್ರೆಲಾ ರೋಚಕ ಪಂದ್ಯದಲ್ಲಿ 4-2 ಅಂತರದಿಂದ ಮಹಾರಾಷ್ಟ್ರದ ದಿವ್ಯಾಂಶಿ ಭೌಮಿಕ್ ವಿರುದ್ಧ ಜಯಗಳಿಸಿದರು.
ಅಗ್ರ ಶ್ರೇಯಾಂಕದ ಮಾನುಷ್ ಶಾ ಮತ್ತು ಕರ್ನಾಟಕದ ಯಶಸ್ವಿನಿ ಘೋರ್ಪಡೆ ಅವರು ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕದೊಂದಿಗೆ ಅಭಿಯಾನ ಮುಗಿಸಿದರು. ಯಶಸ್ವಿನಿ 1–4ರಿಂದ ದಿವ್ಯಾಂಶಿಗೆ ಸೋತರು.
ಅರ್ಹತಾ ಸುತ್ತಿನ ಮೂಲಕ ಬಂದಿದ್ದ ಅನುಭವಿ ಆಟಗಾರ್ತಿ ಶ್ರೀಜಾ ಅಕುಲಾ ಅವರಿಗೆ ಪ್ರಿ ಕ್ವಾರ್ಟರ್ ಫೈನಲ್ಸ್‌ವರೆಗೆ ಮಾತ್ರ ತಲುಪಲು ಸಾಧ್ಯವಾಯಿತು.
19 ವರ್ಷದೊಳಗಿನ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಆರ್‌ಎಸ್‌ಪಿಬಿಯ ಪ್ರಿಯಾನುಜ್ ಭಟ್ಟಾಚಾರ್ಯ 4-3 ಅಂತರದಿಂದ ತಮಿಳುನಾಡಿನ ಪಿ.ಬಿ. ಅಭಿನಂದ್ ಅವರನ್ನು ಸೋಲಿಸಿದರು.
ಮಹಿಳೆಯರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಸಿಂಡ್ರೆಲಾ 4-1ರಿಂದ ತಮಿಳು ನಾಡಿನ ಅನನ್ಯಾ ಮುರಳೀಧರನ್ ಅವರನ್ನು ಮಣಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-4-1191899107