
ಈಜೀಪುರ ಬಫರ್ ರಸ್ತೆ ಕಾಮಗಾರಿಗೆ ಹೊಸ ಡೆಡ್‌ಲೈನ್; ಈ ಭಾಗದ ರಸ್ತೆ ಅಗಲೀಕರಣ, ಆಸ್ತಿದಾರರಿಗೆ ಸಣ್ಣ ಗುಡ್‌ನ್ಯೂಸ್: ಮಹೇಶ್ವರ್ ರಾವ್
ಈಜೀಪುರ ಮೇಲ್ಸೇತುವೆ ಹಾಗೂ ರಸ್ತೆ ಕಾಮಗಾರಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಹೊಸ ಡೆಡ್‌ಲೈನ್ ಕೊಟ್ಟಿದ್ದಾರೆ. ಇದರೊಂದಿಗೆ ಆಸ್ತಿದಾರರಿಗೆ ಸಣ್ಣ ಗುಡ್‌ನ್ಯೂಸ್ ಸಹ ಕೊಟ್ಟಿದ್ದಾರೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಈಜೀಪುರ ಬಳಿಯ ಬಫರ್ ರಸ್ತೆ (ಸಂಚಾರಯುಕ್ತ ರಸ್ತೆ) ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಬಿಎ ವ್ಯಾಪ್ತಿಯ ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಲೋವರ್ ಅಗರಂ ಜಂಕ್ಷನ್‌ನಿಂದ ಈಜೀಪುರ ರಸ್ತೆಯವರೆಗೆ ಪ್ರಗತಿಯಲ್ಲಿರುವ 5.45 ಕಿ.ಮೀ. ಉದ್ದದ ಬಫರ್ ರಸ್ತೆ ಕಾಮಗಾರಿಗೆ ವೇಗ ನೀಡಿ, ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಲೋವರ್ ಅಗರಂ ರಸ್ತೆಯಿಂದ ಈಜಿಪುರ ರಸ್ತೆಯವರೆಗೆ 2.45 ಕಿ.ಮೀ. ಹಾಗೂ ಈಜೀಪುರ ರಸ್ತೆಯಿಂದ ಸರ್ಜಾಪುರ ರಸ್ತೆಯವರೆಗೆ 3 ಕಿ.ಮೀ. ಸೇರಿದಂತೆ ಒಟ್ಟು 5.45 ಕಿ.ಮೀ. ಉದ್ದದ ಬಫರ್ ರಸ್ತೆ ನಿರ್ಮಿಸಲಾಗುತ್ತಿದೆ. ಈ ಸಂಬಂಧ ಈಜೀಪುರ ಬಳಿ ಬಫರ್ ರಸ್ತೆ ನಿರ್ಮಾಣಕ್ಕಾಗಿ ರಕ್ಷಣಾ ಇಲಾಖೆಯಿಂದ 5.34 ಎಕರೆ ಜಾಗವನ್ನು ಹಸ್ತಾಂತರಿಸಲಾಗಿದ್ದು, ಈ ಭಾಗದಲ್ಲಿ ಶೇ. 90ರಷ್ಟು ತಡೆಗೋಡೆ ಕಾಮಗಾರಿ ಪೂರ್ಣಗೊಂಡಿದೆ.
ಜೊತೆಗೆ, ಚರಂಡಿ ಹಾಗೂ ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಮಳೆ ನೀರು ವ್ಯರ್ಥವಾಗಿ ಹರಿದುಹೋಗದೆ ಭೂಮಿಗೆ ಇಂಗುವಂತೆ ಮಾಡುವಂತೆ ಹೇಳಲಾಗಿದೆ. ಅಲ್ಲದೆ ಬಫರ್ ರಸ್ತೆಗೆ ಹೊಂದಿಕೊಂಡಂತಿರುವ ಎಸ್.ಟಿ ಬೆಡ್ ಕಾಲೋನಿ ಪ್ರದೇಶವು ತಗ್ಗು ಪ್ರದೇಶವಾಗಿರುವುದರಿಂದ, ಸದರಿ ಪ್ರದೇಶದಲ್ಲಿ ಪ್ರವಾಹ ಉಂಟಾಗದಂತೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ಬಫರ್ ವ್ಯಾಪ್ತಿಯಲ್ಲಿ ಸೂಕ್ತ ಮಾದರಿಯ ಮಳೆ ನೀರು ಚರಂಡಿಗಳನ್ನು ನಿರ್ಮಾಣ ಮಾಡಲು ತಿಳಿಸಿದ್ದಾರೆ.
ಈಜೀಪುರ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ
ಈಜೀಪುರ ಮೇಲ್ಸೇತುವೆ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು, ಕಾಮಗಾರಿಗೆ ಮತ್ತಷ್ಟು ವೇಗ ನೀಡಿ, ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದಿದ್ದಾರೆ. ಈಜೀಪುರ ಮೇಲ್ಸೇತುವೆಯ ಕೆಳಭಾಗದ ಸರ್ವಿಸ್ ರಸ್ತೆಯಲ್ಲಿರುವ ಪಾದಚಾರಿ ಮಾರ್ಗವು ಕಿರಿದಾಗಿರುವುದನ್ನು ಗಮನಿಸಿದ ಅವರು, ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡ ತಕ್ಷಣ ಪಾದಚಾರಿ ಮಾರ್ಗವನ್ನು ಅಗಲೀಕರಣ ಮಾಡಲು ಹೇಳಲಾಗಿದೆ.
ಬೆಂಗಳೂರು ಆಸ್ತಿದಾರರಿಗೆ ಗುಡ್‌ನ್ಯೂಸ್
ಇನ್ನು ಬೆಂಗಳೂರಿನ ಆಸ್ತಿದಾರರಿಗೆ ಸಣ್ಣ ಗುಡ್‌ನ್ಯೂಸ್ ಕೊಡಲಾಗಿದೆ. ಖಾಲಿ ನಿವೇಶನಗಳ ಶುಚಿತ್ವದ ಗಡುವನ್ನು ವಿಸ್ತರಣೆ ಮಾಡಲಾಗಿದೆ.
"ತ್ಯಾಜ್ಯದಿಂದ ಸ್ವಾತಂತ್ರ್ಯ" (ಫ್ರೀಡಂ ಫ್ರಮ್ ವೇಸ್ಟ್) ಅಭಿಯಾನದ ಭಾಗವಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಸುರಿಯಲಾಗಿರುವ ಕಟ್ಟಡ ತ್ಯಾಜ್ಯ (ಡೆಬ್ರಿಸ್), ಬೆಳೆದಿರುವ ಕಳೆ ಗಿಡಗಳು ಮತ್ತು ಇತರ ತ್ಯಾಜ್ಯಗಳನ್ನು ತೆರವುಗೊಳಿಸಲು ನಗರದಾದ್ಯಂತ 100 ಟ್ರಕ್‌ಗಳು ಹಾಗೂ 25 ಜೆಸಿಬಿ/ಎಸ್ಕವೇಟರ್‌ಗಳನ್ನು ನಿಯೋಜಿಸಲಾಗಿದೆ. ಇಲ್ಲಿಯವರೆಗೆ ಈ ಅಭಿಯಾನದ ಮೂಲಕ 30,000 ಟನ್‌ಗಳಿಗೂ ಹೆಚ್ಚು ತ್ಯಾಜ್ಯ ಮತ್ತು ಕಳೆ ಗಿಡಗಳನ್ನು ತೆರವುಗೊಳಿಸಲಾಗಿದೆ.
ಆಸ್ತಿ ಮಾಲೀಕರು ತಮ್ಮ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ನೀಡಲಾಗಿದ್ದ ಮೂಲ ಗಡುವು ಆಗಸ್ಟ್ 15 ಆಗಿತ್ತು. ಹೆಚ್ಚಿನ ಸಮಯಾವಕಾಶ ನೀಡುವಂತೆ ಸಾರ್ವಜನಿಕರಿಂದ ಬಂದ ಮನವಿಗಳನ್ನು ಪರಿಗಣಿಸಿ, ಗಡುವನ್ನು ಆಗಸ್ಟ್ 22 ರವರೆಗೆ ವಿಸ್ತರಿಸಲಾಗಿದೆ. ಎಲ್ಲಾ ಆಸ್ತಿ ಮಾಲೀಕರು ಈ ಹೆಚ್ಚಿನ ಸಮಯಾವಕಾಶವನ್ನು ಬಳಸಿಕೊಂಡು ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿ, ನಗರದಾದ್ಯಂತ ನಡೆಯುತ್ತಿರುವ ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಹಕರಿಸಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮನವಿ ಮಾಡಿದ್ದಾರೆ.