
ಕೆಪಿಎಸ್‌ಸಿ ಕಚೇರಿಯಲ್ಲಿದ್ದ ಸಿಸಿಟಿವಿ ದೃಶ್ಯ ದಾಖಲೆಯೇ ನಾಶ; ಸಿಐಡಿ ಪತ್ತೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಚೇರಿಯಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ಅಳಿಸಿ ಹಾಕಿರುವುದನ್ನು ಸಿಐಡಿ ತನಿಖಾ ತಂಡ ಪತ್ತೆ ಮಾಡಿದೆ.
ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ಬೆನ್ನತ್ತಿರುವ ಸಿಐಡಿ ತಂಡವು, ಕೆಪಿಎಸ್‌ಸಿ ಕಚೇರಿಯ ಮೇಲೆ ಎರಡನೇ ಬಾರಿಗೆ ಮಂಗಳವಾರ ದಾಳಿ ನಡೆಸಿತ್ತು. ತಡರಾತ್ರಿವರೆಗೆ ಶೋಧ ನಡೆಸಿತ್ತು.
ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಪ್ರತಿಗಳನ್ನು ಇಡಲಾಗುವ ‘ಸ್ಟ್ರಾಂಗ್ ರೂಮ್’ನಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಅಳಿಸಿ ಹಾಕಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ಕೃತ್ಯ ಬಯಲಾಗದಂತೆ ಸಾಕ್ಷ್ಯನಾಶದ ಉದ್ದೇಶದಿಂದ ಈ ಕೆಲಸ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ನಗರದ ಮೂರು ಕೇಂದ್ರಗಳಲ್ಲಿ ಜ.9ರಂದು ಪರೀಕ್ಷೆ ನಡೆದಿತ್ತು. ಆ ಕೇಂದ್ರಗಳಿಗೆ ಸ್ಟ್ರಾಂಗ್ ರೂಮ್‌ನಿಂದಲೇ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಲಾಗಿತ್ತು. ಪರೀಕ್ಷೆ ಆರಂಭವಾಗುವುದಕ್ಕೂ ಮೊದಲು ಆ ಕೊಠಡಿಯ ಬಾಗಿಲು ತೆರೆದು ಪ್ರಶ್ನೆ ಪತ್ರಿಕೆಗಳನ್ನು ರವಾನೆ ಮಾಡಬೇಕೆಂಬ ನಿಯಮವಿದೆ. ಪರೀಕ್ಷೆ ಮುಕ್ತಾಯವಾದ ಮೇಲೂ ಅದೇ ರೂಮ್‌ಗೆ ಒಎಂಆರ್ ಪ್ರತಿಗಳನ್ನು ತಂದು ಇಡಬೇಕು. ಇದರ ಮೇಲಿನ ನಿಗಾ ಇಡಲು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ, ಕಳೆದ ಆರು ತಿಂಗಳ ದೃಶ್ಯಾವಳಿಗಳು ಇಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.
‘ಪರೀಕ್ಷೆ ಮುಕ್ತಾಯದ ಒಂದು ವರ್ಷದ ವರೆಗೆ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸಂಗ್ರಹವಾದ ದತ್ತಾಂಶವನ್ನು ಸಂಗ್ರಹ ಮಾಡಿ ಇಡಬೇಕು. ದತ್ತಾಂಶ ಪತ್ತೆ ಆಗುತ್ತಿಲ್ಲ. ಯಾವುದೇ ನೇಮಕಾತಿ ಪರೀಕ್ಷೆ ಮುಕ್ತಾಯವಾದ ಮೇಲೆ ಒಎಂಆರ್ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಹಾರ್ಡ್ ಡಿಸ್ಕ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ ಒಎಂಆರ್ ಪ್ರತಿಗಳನ್ನು ಸಂಗ್ರಹಿಸಿರುವ ಹಾರ್ಡ್ ಡಿಸ್ಕ್ ನಾಪತ್ತೆಯಾಗಿದೆ’ ಎಂದು ಮೂಲಗಳು ಹೇಳಿವೆ.
ವಿಚಾರಣೆಗೆ ಬರಲು ಸಾಹುಕಾರಗೆ ಸೂಚನೆ
ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ, ಸದಸ್ಯೆ ಶಾಂತ ಹೊಸಮನಿ ಅವರಿಗೆ ಎರಡನೇ ಬಾರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿದೆ.
‘ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳ ಪೈಕಿ 329 ಮಂದಿಯ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ. ಪ್ರತಿನಿತ್ಯ 10 ಅಭ್ಯರ್ಥಿಗಳ ಹೇಳಿಕೆ ದಾಖಲು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆಯೋಗದ ಹಿಂದಿನ ಪರೀಕ್ಷಾ ನಿಯಂತ್ರಕ ಐಎಎಸ್ ಅಧಿಕಾರಿ ಘ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಸಿಐಡಿ ನೋಟಿಸ್ ಜಾರಿ ಮಾಡಿಲ್ಲ’ ಎಂದು ತನಿಖಾ ತಂಡದ ಮೂಲಗಳು ಹೇಳಿವೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-14-1482652264