
ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಿ ಗುಂಡ್ಲುಪೇಟೆಯಲ್ಲಿ ಸಲಹೆ
ಗುಂಡ್ಲುಪೇಟೆ: ಪ್ರತಿಯೊಬ್ಬರಿಗೂ ಕಣ್ಣು ಪ್ರಮುಖ ಅಂಗ. ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದು ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಸಲಹೆ ನೀಡಿದರು.
ಅರವಿಂದ ಕಣ್ಣಿನ ಆಸ್ಪತ್ರೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಆರಂಭದಲ್ಲಿಯೇ ಎಚ್ಚೆತ್ತುಕೊಂಡರೆ ದೃಷ್ಟಿನಾಶದಿಂದ ಪಾರಾಗಬಹುದು. ಮತ್ತೊಬ್ಬರ ಅವಲಂಬನೆಯಿಲ್ಲದೆ ಬದುಕಬಹುದು ಎಂದರು.
ನಿವೃತ್ತ ಸಹಾಯಕ ಸಬ್ ಇನ್ಸ್ಪೆಕ್ಟರ್ ವಿಶ್ವಣ್ಣ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಶಿಬಿರ ಆಯೋಜಿಸಿ ಹೆಚ್ಚಿನ ಜನರಿಗೆ ನೆರವಾಗಬೇಕಾಗಿದೆ ಎಂದು ಹೇಳಿದರು.
ಅರವಿಂದ ಕಣ್ಣಿನ ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ವಿಜಯಕಾಂತ್ ಮಾತನಾಡಿ, ತಾಲ್ಲೂಕಿನಲ್ಲಿ ಸುಮಾರು 500ಕ್ಕೂ ಹೆಚ್ಚಿನ ಶಿಬಿರ ನಡೆಸಿ ಕಣ್ಣಿನ ತೊಂದರೆಯಿದ್ದ 35 ಸಾವಿರ ಜನರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು. ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಎಸ್.ಪ್ರಸಾದ್ ಮಾತನಾಡಿದರು.
ವೈದ್ಯರಾದ ಡಾ.ಲಿಯೋಸೋನಿ, ಡಾ.ಸಾಯಿಕಾರ್ತಿಕ್, ಡಾ.ಡೆನ್ನಿಪ್ರಸಾದ್ ತಂಡವು 90 ಹೊರ ರೋಗಿಗಳನ್ನು ತಪಾಸಣೆಗೆ ಒಳಪಡಿಸಿ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದ 30 ಜನರನ್ನು ಕೊಯಮತ್ತೂರಿನ ಆಸ್ಪತ್ರೆಗೆ ಕರೆದೊಯ್ದರು.
ಕೆ.ಎನ್.ನಾಗಲಾಂಬಿಕೆ, ನಿವೃತ್ತ ಮುಖ್ಯೋಪಾಧ್ಯಾಯ ಕೆ.ಸಿ.ನಾಗಮಲ್ಲಪ್ಪ, ಅನುಗ್ರಹ ಸಂಸ್ಥೆಯ ಸಂಯೋಜಕ ಕೆ.ರಮೇಶ್, ಕರ್ನಾಟಕ ಪತ್ರಕರ್ತರ ಸಂಘದ ಸಂಚಾಲಕ ರಾ.ಬಾಬು, ಕೆ.ಎನ್.ಮಹದೇವಸ್ವಾಮಿ, ಭೈರೇಶ್ ಗಾಣಿಗ್, ಮಲ್ಲು, ಶ್ರೀನಿವಾಸ್, ವೀರಭದ್ರಪ್ಪ, ವೇಣುಗೋಪಾಲ, ಸಿದ್ದಪ್ಪ, ಆರ್.ಶಂಕರನಾರಾಯಣ ಜೋಯಿಸ್ ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260802-37-531501314

0 Comments
If u have any queries, Please let us know