ಟೀಂ ಇಂಡಿಯಾ ನೂತನ ಫೀಲ್ಡಿಂಗ್ ಕೋಚ್ ಆಗಿ ಸುಭದೀಪ್ ಘೋಷ್; ಏನಿವರ ಹಿನ್ನೆಲೆ?
ಕಳೆದ 5 ವರ್ಷಗಳಿಂದ ಭಾರತ ಪುರುಷರ ಕ್ರಿಕೆಟ್ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದ ಟಿ.ದಿಲೀಪ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಜಾಗಕ್ಕೆ ಸುಭದೀಪ್ ಘೋಷ್ ಅವರನ್ನು ಬಿಸಿಸಿಐ ನೇಮಿಸಿದೆ.
2021ರಿಂದ ತಂಡದ ಭಾಗವಾಗಿದ್ದ ಟಿ. ದಿಲೀಪ್ ಅವರು ತಂಡದ ಕೋಚ್‌ಗಳಾಗಿದ್ದ ರಾಹುಲ್ ದ್ರಾವಿಡ್ ಹಾಗೂ ಗೌತಮ್ ಗಂಭೀರ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಇವರ ಅವಧಿಯಲ್ಲಿ ಭಾರತ ತಂಡವು 2024, 2026ರ ಟಿ20 ವಿಶ್ವಕಪ್, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2023, 2025ರ ಏಷ್ಯಾಕಪ್ ಟ್ರೋಫಿಗಳನ್ನು ಎತ್ತಿಹಿಡಿದಿತ್ತು.
ಹೊಸ ಫೀಲ್ಡಿಂಗ್ ಕೋಚ್ ಆಗಿ ಸುಭದೀಪ್ ಘೋಷ್
ಹೊಸ ಫೀಲ್ಡಿಂಗ್ ಕೋಚ್ ಆಗಿ ಆಯ್ಕೆಯಾಗಿರುವ ಸುಭದೀಪ್ ಘೋಷ್ ಅವರು ಮುಂಬರುವ ಶ್ರೀಲಂಕಾ ತಂಡದ ವಿರುದ್ಧ ನಡೆಯುವ ಟೆಸ್ಟ್ ಪಂದ್ಯದೊಂದಿಗೆ ತಮ್ಮ ಅಭಿಯಾನವನ್ನು ಆರಂಭಿಸಲಿದ್ದಾರೆ. ಹಾಗಾದರೆ, ಯಾರು ಈ ಸುಭದೀಪ್ ಘೋಷ್, ಕ್ರಿಕೆಟ್‌ನಲ್ಲಿ ಇವರ ಸಾಧನೆಗಳೇನು ಎಂಬುದನ್ನ ನೋಡೋಣ.
ದೇಶೀಯ ಕ್ರಿಕೆಟ್‌ನಲ್ಲಿ ಶುಭದೀಪ್ ಘೋಷ್ ಹೆಚ್ಚು ಪರಿಚಿತರಾಗಿದ್ದಾರೆ. ಇವರು ಅಸ್ಸಾಂ, ರೈಲ್ವೇಸ್ ಈ ಎರಡು ತಂಡಗಳನ್ನು ಪ್ರತಿನಿಧಿಸಿದ್ದಾರೆ. 1994ರಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಇವರು, 2005ರ ವರೆಗೆ 17 ಪ್ರಥಮ ದರ್ಜೆ ಹಾಗೂ 17 ಲಿಸ್ಟ್-ಎ ಪಂದ್ಯಗಳನ್ನಾಡಿದ್ದಾರೆ. 34 ಪಂದ್ಯಗಳಲ್ಲಿ 4 ಅರ್ಧಶತದೊಂದಿಗೆ 623 ರನ್ ಬಾರಿಸಿದ್ದಾರೆ. ವೃತ್ತಿ ಬದುಕಿನಲ್ಲಿ16 ಕ್ಯಾಚ್‌ಗಳನ್ನು ಪಡೆದುಕೊಂಡಿದ್ದಾರೆ.
ಐಪಿಎಲ್‌ನಲ್ಲಿಯೂ ಕೆಲಸ ಮಾಡಿದ ಅನುಭವವಿರುವ ಘೋಷ್ ಅವರು, ವಿವಿಧ ಪ್ರಾಂಚೈಸಿಯಲ್ಲಿ ಸಿಬಂದ್ದಿಯಾಗಿ ಕೆಲಸ ಮಾಡಿದ್ದಾರೆ. ಅದರಲ್ಲಿಯೂ 2014ರಲ್ಲಿ ಗೌತಮ್ ಗಂಭೀರ್ ನೇತೃತ್ವದಲ್ಲಿ ಟ್ರೋಫಿ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಸಹಾಯಕ ಕೋಚ್ ಆಗಿದ್ದರು. ಮಾತ್ರವಲ್ಲದೆ, ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿಯೂ ಕೆಲಸ ಮಾಡಿದ್ದಾರೆ.
ಕೆಲಕಾಲ ಅಸ್ಸಾಂ ತಂಡದ ಮುಖ್ಯ ತರಬೇತುದಾರರಾಗಿಯೂ ಕರ್ತವ್ಯ ನಿಭಾಯಿಸಿದ್ದಾರೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಮಾಜಿ ಆಟಗಾರರಾದ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಕೆಲಸ ಮಾಡಿದ್ದಾರೆ.
2021ರಲ್ಲಿ ಶುಭದೀಪ್ ಘೋಷ್ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಇದೇ ವೇಳೆ ತಂಡದ ತಾರಾ ಆಟಗಾರರಾದ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನ ಅವರೊಂದಿಗೆ, ಆಟದ ಕುರಿತು ನಿರಂತರ ಚರ್ಚೆ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದರು.
2026ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್ ಟ್ರೋಫಿ ಗೆದ್ದ ತಂಡದ ಫೀಲ್ಡಿಂಗ್ ಕೋಚ್ ಆಗಿ ಶುಭದೀಪ್ ಘೋಷ್ ಇದ್ದರು.