
ಶೀಘ್ರವೇ ಬಸ್ ಪ್ರಯಾಣ ದರ ಹೆಚ್ಚಳ: ಸಾರಿಗೆ ಸಚಿವ ಬೈರತಿ ಸುರೇಶ್ ಸುಳಿವು
ಬೆಂಗಳೂರು: ಡೀಸೆಲ್ ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಸೋಮವಾರ ಸುಳಿವು ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್, 'ಕರ್ನಾಟಕ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ಅಧ್ಯಕ್ಷ ಅತುಲ್ ಕುಮಾರ್ ತಿವಾರಿ ಅವರ ನೇತೃತ್ವದಲ್ಲಿ ಟಿಕೆಟ್ ದರಗಳ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ' ಎಂದು ತಿಳಿಸಿದ್ದಾರೆ.
'ನಾವು ಅತುಲ್ ತಿವಾರಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದೇವೆ. ಸಮಿತಿ ರಚನೆಯಾಗಿ ಈಗಾಗಲೇ ಸುಮಾರು 20 ದಿನಗಳು ಕಳೆದಿವೆ. ಅವರು ಎಲ್ಲಾ ನಾಲ್ಕೂ ಸಾರಿಗೆ ನಿಗಮಗಳು ಹಾಗೂ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಶೀಘ್ರದಲ್ಲೇ ವರದಿ ಸಲ್ಲಿಸಲಿದ್ದಾರೆ' ಎಂದಿದ್ದಾರೆ.
ವರದಿ ಸಲ್ಲಿಸಿದ ಬಳಿಕ ಬಸ್ ಪ್ರಯಾಣ ದರ ಏರಿಕೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಸಚಿವರು ಹೇಳಿದ್ದಾರೆ. 'ನಾವು ಈ ವರದಿಯನ್ನು ಸಂಪುಟ ಸಭೆಯ ಮುಂದೆ ಇಟ್ಟು, ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದು ಅವರು ತಿಳಿಸಿದ್ದಾರೆ.
'ಕಳೆದ ಬಾರಿ ಬಸ್ ಪ್ರಯಾಣ ದರ ಪರಿಷ್ಕರಣೆಯಾದ ನಂತರ ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಆದರೂ ಬಸ್ ಪ್ರಯಾಣ ದರ ಏರಿಕೆಯಾಗಿಲ್ಲ. ಪ್ರತಿ ವರ್ಷ ನಾಲ್ಕೂ ಸಾರಿಗೆ ನಿಗಮಗಳು ಒಟ್ಟಾಗಿ ಸುಮಾರು ₹8,000ದಿಂದ ₹10,000 ಕೋಟಿ ನಷ್ಟ ಅನುಭವಿಸುತ್ತಿದೆ. ನಮಗೆ ಈ ಹಣ ಎಲ್ಲಿಂದ ಸಿಗಬೇಕು? ಇಲ್ಲದಿದ್ದರೆ ನಾವು ನಿಗಮಗಳನ್ನು ಮುಚ್ಚಬೇಕಾಗುತ್ತದೆ' ಎಂದು ಹೇಳಿದ್ದಾರೆ.
ಈ ಮೊದಲು ತೈಲೋತ್ಪನ್ನಗಳ ಬೆಲೆ ಹೆಚ್ಚಳದಿಂದಾಗಿ ನಿಗಮಗಳಿಗೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ. ಜನ ಸಾಮಾನ್ಯರಿಗೆ ಹೊರೆ ಆಗದ ರೀತಿಯಲ್ಲಿ ಪ್ರಯಾಣ ದರ ಹೆಚ್ಚಳ ಮಾಡಲಾಗುವುದು ಎಂದು ಬೈರತಿ ಸುರೇಶ್ ಹೇಳಿಕೆ ನೀಡಿದ್ದರು.