ಕಲಬುರಗಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಶುಚಿತ್ವಕ್ಕಾಗಿ ಮ್ಯಾರಥಾನ್, ಸೈಕ್ಲೋಥಾನ್
ಕಲಬುರಗಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಚ್ಛತಾ ಜಾಗೃತಿ ಮೂಡಿಸಲು ನಗರದಲ್ಲಿ ಶುಕ್ರವಾರ 'ರನ್ ಫಾರ್ ಶತಾಭಿಷೇಕಂ' ಅಡಿಯಲ್ಲಿ ಮ್ಯಾರಥಾನ್ ಹಾಗೂ ಸೈಕ್ಲೋಥಾನ್ ನಡೆಯಿತು.
ನಗರದ ಕೋಟೆಯ ಬಳಿ ಮ್ಯಾರಥಾನ್ ಹಾಗೂ ಸೈಕ್ಲೋಥಾನ್ ಗೆ ಮೇಯರ್ ವರ್ಷಾ ಜಾನೆ, ಪಾಲಿಕೆ ಆಯುಕ್ತ ಅವಿನಾಶ ಶಿಂದೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಕಲಬುರಗಿ ಮಹಾನಗರ ಪಾಲಿಕೆಯಿಂದ ಸ್ವಚ್ಛ ಭಾರತ ಮಿಷನ್ 2.0 ಘಟಕದಡಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.
ಕೋಟೆ ಎದುರಿನಿಂದ ಆರಂಭವಾದ ಓಟ ಹಾಗೂ ಸೈಕ್ಲೋಥಾನ್ ಸೂಪರ್ ಮಾರ್ಕೆಟ್, ಜಗತ್ ವೃತ್ತ, ಅನ್ನಪೂರ್ಣ ಕ್ರಾಸ್, ಲಾಹೋಟಿ ಪೆಟ್ರೋಲ್ ಪಂಪ್, ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಬಂದು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ತಲುಪಿ ಸಂಪನ್ನಗೊಂಡಿತು.
ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂದೆ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಂಕನೂರ, ಕೆಕೆಆರ್ ಡಿಬಿ ಕಾರ್ಯದರ್ಶಿ ನಲೀನ್ ಅತುಲ್, ಉಪ ವಿಭಾಗಾಧಿಕಾರಿ ಸಾಹಿತ್ಯಾ ಆಲದಕಟ್ಟಿ, ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಎಸ್ಪಿ ಅಡ್ಡೂರು ಶ್ರೀನಿವಾಸುಲು, , ಡಿಸಿಪಿ ಶಾಲೂ ಸೇರಿದಂತೆ ಹಲವರು ಸೈಕಲ್ ತುಳಿದರು. ಮೇಯರ್ ವರ್ಷಾ ಜಾನೆ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಪಾಲಿಕೆ ಆಯುಕ್ತ ಅವಿನಾಶ ಶಿಂದೆ, ಉಪವಿಭಾಗಾಧಿಕಾರಿ ಸಾಹಿತ್ಯಾ ಆಲದಕಟ್ಟಿ, ಡಿಸಿಎಫ್ ಆಶಿಶ್ ರೆಡ್ಡಿ, ಸೇರಿದಂತೆ ಹಲವರು ಓಟದ ಮೂಲಕ ಈ 'ಮ್ಯಾರಥಾನ್'ನಲ್ಲಿ ಪಾಲ್ಗೊಂಡಿದ್ದರು.