ಸಿಎಂ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಅವಕಾಶ ವಂಚಿತ ಸಿದ್ದರಾಮಯ್ಯ ಸಂಪುಟದ ಸಚಿವರು

ಸಿಎಂ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಅವಕಾಶ ವಂಚಿತ ಸಿದ್ದರಾಮಯ್ಯ ಸಂಪುಟದ ಸಚಿವರು

ಸಿಎಂ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಅವಕಾಶ ವಂಚಿತ ಸಿದ್ದರಾಮಯ್ಯ ಸಂಪುಟದ ಸಚಿವರು

ಬೆಂಗಳೂರು: ಪ್ರಸಕ್ತ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಚಿವರಾಗಿದ್ದ ಹಲವರಿಗೆ ಇದೀಗ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ.

ಹೀಗೆ ಸಚಿವ ಸ್ಥಾನ ಕಳೆದುಕೊಂಡವರ ಪಟ್ಟಿ ಇಂತಿದೆ:

ಎಚ್‌.ಕೆ.ಪಾಟೀಲ: ಕಳೆದ ಸಂಪುಟದಲ್ಲಿ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದ ಗದಗ ಕ್ಷೇತ್ರದ ಶಾಸಕ ಎಚ್‌.ಕೆ.ಪಾಟೀಲ ಅವರು ಈ ಹಿಂದೆ ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರ ಸೇರಿದಂತೆ ಹಲವು ಖಾತೆಗಳನ್ನು ನಿರ್ವಹಿಸಿದ್ದರು. ಈ ಬಾರಿ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.

ದಿನೇಶ್ ಗುಂಡೂರಾವ್: ಕಳೆದ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ಗಾಂಧೀನಗರ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ಲಭಿಸಿಲ್ಲ. ಆಹಾರ ಸಚಿವರಾಗಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಸೇರಿದಂತೆ ಪಕ್ಷ ಮತ್ತು ಸರ್ಕಾರದಲ್ಲಿ ವಿವಿಧ ಜವಾಬ್ದಾರಿಗಳನ್ನು ಅವರು ನಿರ್ವಹಿಸಿದ್ದರು.

ಕೆ.ವೆಂಕಟೇಶ್: ಪಿರಿಯಾಪಟ್ಟಣ ಕ್ಷೇತ್ರದ ಶಾಸಕ ಕೆ.ವೆಂಕಟೇಶ್ ಅವರಿಗೂ ಈ ಬಾರಿ ಸಚಿವ ಸ್ಥಾನ ಕೈತಪ್ಪಿದೆ. ಹಿಂದಿನ ಸಂಪುಟದಲ್ಲಿ ಅವರು ಪಶುಸಂಗೋಪನೆ, ರೇಷ್ಮೆ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದರು.

ಎಚ್‌.ಸಿ.ಮಹಾದೇವಪ್ಪ: ಸಮಾಜ ಕಲ್ಯಾಣ ಸಚಿವರಾಗಿದ್ದ ಟಿ.ನರಸೀಪುರ ಕ್ಷೇತ್ರದ ಶಾಸಕ ಎಚ್‌.ಸಿ.ಮಹಾದೇವಪ್ಪ ಅವರು ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಅವರಿಗೂ ಈ ಬಾರಿ ಅವಕಾಶ ಸಿಕ್ಕಿಲ್ಲ. 2013ರಲ್ಲಿ ಅವರು ಲೋಕೋಪಯೋಗಿ ಸಚಿವರಾಗಿದ್ದರು.

ಶರಣಬಸಪ್ಪ ದರ್ಶನಾಪುರ: ಶಹಾಪುರ ವಿಧಾನಸಭಾ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿರುವ ಶರಣಬಸಪ್ಪ ದರ್ಶನಾಪುರ ಅವರು ಜೆ.ಎಚ್.ಪಟೇಲ್ ಸಂಪುಟದಲ್ಲಿ ಇಂಧನ ಸಚಿವರಾಗಿ, ಎಚ್‌.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಕೃಷಿ ಮಾರುಕಟ್ಟೆ ಸಚಿವರಾಗಿ ಹಾಗೂ ಸಿದ್ದರಾಮಯ್ಯ ಸಂಪುಟದಲ್ಲಿ ಸಣ್ಣ ಕೈಗಾರಿಕೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಈ ಬಾರಿ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ.

ಶಿವಾನಂದ ಪಾಟೀಲ: ಬಸವನಬಾಗೇವಾಡಿ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲ ಅವರು ಜವಳಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಖಾತೆಗಳನ್ನು ನಿರ್ವಹಿಸಿದ್ದರು. ಅವರಿಗೂ ಈ ಬಾರಿ ಸಚಿವ ಸ್ಥಾನ ಕೈತಪ್ಪಿದೆ.

ಆರ್‌.ಬಿ.ತಿಮ್ಮಾಪುರ: ಮುದೋಳ ಕ್ಷೇತ್ರದ ಶಾಸಕ ಆರ್‌.ಬಿ.ತಿಮ್ಮಾಪುರ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದರು. ಈ ಹಿಂದೆ ಕೂಡ ಸಚಿವರಾಗಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಅವರಿಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ.

ಲಕ್ಷ್ಮೀ ಹೆಬ್ಬಾಳ್ಕರ್: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾಗಿದ್ದರು. ಈ ಬಾರಿಯ ಸಂಪುಟದಲ್ಲಿ ಅವರಿಗೂ ಅವಕಾಶ ಸಿಕ್ಕಿಲ್ಲ.

ರಹೀಂ ಖಾನ್: ಬೀದರ್ ಕ್ಷೇತ್ರದ ಶಾಸಕ ರಹೀಂ ಖಾನ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಪೌರಾಡಳಿತ ಮತ್ತು ಹಜ್ ಸಚಿವರಾಗಿದ್ದರು. ಈ ಹಿಂದೆ ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಅವರು, ಈ ಬಾರಿ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.

ಎನ್‌.ಎಸ್‌.ಬೋಸರಾಜು: ವಿಧಾನ ಪರಿಷತ್ ಸದಸ್ಯರಾಗಿರುವ ಎನ್‌.ಎಸ್‌.ಬೋಸರಾಜು ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದರು. ರಾಯಚೂರು ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರಾಗಿರುವ ಅವರಿಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ.

ಎಂ.ಸಿ.ಸುಧಾಕರ್: ಚಿಂತಾಮಣಿ ಕ್ಷೇತ್ರದ ಶಾಸಕ ಎಂ.ಸಿ.ಸುಧಾಕರ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರು. ಈ ಹಿಂದೆ ಕೂಡ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅವರಿಗೆ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಈ ಬಾರಿ ಅವಕಾಶ ಸಿಕ್ಕಿಲ್ಲ.

ಮಂಕಾಳ ವೈದ್ಯ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಮಂಕಾಳ ಸುಬ್ಬಾ ವೈದ್ಯ ಅವರು 2023ರಲ್ಲಿ ಭಟ್ಕಳ ಕ್ಷೇತ್ರದಿಂದ ಗೆದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೀನುಗಾರಿಕೆ ಮತ್ತು ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

Post a Comment

0 Comments