
ಥಾಯ್ಲೆಂಡ್: ಗುಂಡಿಕ್ಕಿ 8 ಜನರನ್ನು ಕೊಂದ ಬಾಲಕ
ನೊಂಥಬುರಿ (ಥಾಯ್ಲೆಂಡ್) (ಎಪಿ): ಬ್ಯಾಂಕಾಕ್‌ನ ಹೊರವಲಯದಲ್ಲಿರುವ ಪ್ರೌಢ ಶಾಲೆಯೊಂದರಲ್ಲಿ 14 ವರ್ಷದ ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿ ಕನಿಷ್ಠ ಆರು ಜನರನ್ನು ಕೊಂದಿರುವ ಘಟನೆ ಶುಕ್ರವಾರ ನಡೆದಿದೆ. ಈ ಘಟನೆಗೂ ಮೊದಲು ಆತ ತನ್ನ ಮನೆಯಲ್ಲಿ ಅಜ್ಜ–ಅಜ್ಜಿಯನ್ನು ಕೂಡಾ ಗುಂಡಿಕ್ಕಿ ಕೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ 23 ಜನರು ಗಾಯಗೊಂಡಿದ್ದಾರೆ. ಅದರಲ್ಲಿ 10 ಜನರ ಪರಿಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನವರು ಗಂಡೇಂಟಿನಿಂದ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃತ್ಯದ ನಂತರ ಬಾಲಕ ಶಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಾಳಿಗೆ ಬಳಸಿದ ಬಂದೂಕು ಸಣ್ಣದಾಗಿದ್ದು, ಅದು ಬಾಲಕನ ಅಜ್ಜನ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಂಕಾಕ್‌ನ ವಾಯುವ್ಯದಲ್ಲಿರುವ ನೊಂಥಬುರಿ ಪ್ರಾಂತ್ಯದಲ್ಲಿರುವ ದೆಬ್‌ಸಿರಿನ್ ನೊಂಥಬುರಿ ಶಾಲೆಯಲ್ಲಿ ಬೆಳಿಗ್ಗೆ ಸುಮಾರು 10 ಗಂಟೆಗೆ ಘಟನೆ ನಡೆದಿದ್ದು, ಮೃತಪಟ್ಟವರಲ್ಲಿ ಶಾಲೆಯ ಶಿಕ್ಷಕರು ಮತ್ತು ಆಡಳಿತಾಧಿಕಾರಿಗಳು ಸೇರಿದ್ದಾರೆ ಎಂದು ಆಂತರಿಕ ವ್ಯವಹಾರಗಳ ಖಾತೆ ಉಪ ಸಚಿವ ಪೊಲಾಪಿ ಸುವುಂಚ್ವಿ ತಿಳಿಸಿದ್ದಾರೆ.
ಸುಮಾರು 3000 ವಿದ್ಯಾರ್ಥಿಗಳು ನೋಂದಾಯಿಸಿರುವ ಈ ಶಾಲೆಯಲ್ಲಿ 12ರಿಂದ 18 ವರ್ಷದೊಳಗಿನವರು ಇದ್ದರು. ಬಾಲಕ 20ಕ್ಕೂ ಹೆಚ್ಚು ಬಾರಿ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದಾಗ್ಯೂ, ಆತನ ಬಳಿ ಇನ್ನೂ 30 ಸುತ್ತು ಗುಂಡುಗಳಿದ್ದವು ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.