
ಎಂಜಿನಿಯರಿಂಗ್, ವೈದ್ಯಕೀಯ ಸೀಟು ಹಂಚಿಕೆ: ಆಕ್ಷೇಪಣೆಗೆ ಸಂಜೆ 4ರವರೆಗೆ ಅವಕಾಶ
ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ಇತರ ಸಿಇಟಿ ಕೋರ್ಸ್‌ಗಳ ಎರಡನೇ ಸುತ್ತು ಹಾಗೂ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶದ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ.
ಸೀಟು ಹಂಚಿಕೆ ಕುರಿತು ಆಕ್ಷೇಪಣೆಗಳು ಇದ್ದಲ್ಲಿ ಇಂದು (ಸೋಮವಾರ) ಸಂಜೆ 4ಗಂಟೆಯೊಳಗೆ ಸಲ್ಲಿಸಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಇದು ತಾತ್ಕಾಲಿಕ ಫಲಿತಾಂಶವಾಗಿರುವ ಕಾರಣ ಸೀಟು ಹಂಚಿಕೆಯಾಗಿರುವ ಕಾಲೇಜಿನಲ್ಲಿ ಪ್ರವೇಶ ಪಡೆಯುವಂತಿಲ್ಲ. ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೇ ವರ್ಷದ ಮೇ 3ರಂದು ನಡೆಸಲಾಗಿದ್ದ ನೀಟ್–ಯುಜಿ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಕಾರಣ ನೀಡಿ ಎನ್‌ಟಿಎ ರದ್ದು ಮಾಡಿತ್ತು. ಜೂನ್ 21ರಂದು ಮರುಪರೀಕ್ಷೆ ನಡೆಸಲಾಗಿತ್ತು. ನಂತರ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿತ್ತು.
ಬೆಂಗಳೂರಿನ ಜೆ.ಪಿ. ನಗರದ ಶ್ರೀಚೈತನ್ಯ ಟೆಕ್ನೊ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ದಾಸ್, ನೀಟ್ ಮರುಪರೀಕ್ಷೆಯ ಫಲಿತಾಂಶದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ ಪಡೆದಿದ್ದರು. 720ಕ್ಕೆ 700 ಅಂಕಗಳನ್ನು ಪಡೆದ ಅವರು ಅಖಿಲ ಭಾರತ ಮಟ್ಟದಲ್ಲಿ 20ನೇ ರ್‍ಯಾಂಕ್ ಗಳಿಸಿದ್ದರು.