
ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ 3 ರೈತರ ಎನ್ಕೌಂಟರ್ ಕೇಸ್‌ಗೆ ಟ್ವಿಸ್ಟ್: "ನಕಲಿ ಎನ್ಕೌಂಟರ್ - ಕಟ್ಟುಕಥೆ" ಜೆಡಿಎಸ್ ರಿವೀಲ್
ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ನಡೆದಿರುವ ಘಟನೆಯು ಕರ್ನಾಟಕದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಬೇಟೆಗಾರರು ಎನ್‌ಕೌಂಟರ್ ಆಗಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಶನಿವಾರ ಬೆಳಿಗ್ಗೆ 5.20ಕ್ಕೆ ನಡೆದಿತ್ತು ಎಂದು ವರದಿಯಾಗಿತ್ತು.
ಮೃತಪಟ್ಟವರನ್ನು ಹನೂರು ತಾಲ್ಲೂಕಿನ ತೋಮಿಯರ್ ಪಾಳ್ಯ ಗ್ರಾಮದ ಅಂಥೋನಿ ಸ್ವಾಮಿ, ಪೀಟರ್ ಹಾಗೂ ಕುಮಾರ್ ಎಂದು ಗುರುತಿಸಲಾಗಿದೆ. ಇವರ ಜೊತೆಗಿದ್ದ ಮಹಿಮ ದಾಸ್ ಎನ್ನುವವರು ಗಾಯಗೊಂಡಿದ್ದಾರೆ. ಅಲ್ಲದೆ ಈ ಚಕಮಕಿಯಲ್ಲಿ ಒಬ್ಬರು ಅರಣ್ಯ ಸಿಬ್ಬಂದಿಯೂ ಸಹ ಗಾಯಗೊಂಡಿದ್ದಾರೆ. ಪ್ರಾಣಿ ಬೇಟೆಯಾಡಿ ಬರುತ್ತಿದವರು ಮಾಡಿದ ಗುಂಡಿನ ದಾಳಿ ತಡೆಯುವ ಉದ್ದೇಶದಿಂದ ಪ್ರತಿದಾಳಿ ನಡೆಸಲಾಗಿದ್ದು, ಈ ವೇಳೆ ಮೂವರು ಸಾವನ್ನಪ್ಪಿದ್ದಾರೆ ಎಂದು ಅರಣ್ಯ ಇಲಾಖೆ ಹೇಳಿದೆ. ಆದರೆ, ಇದನ್ನು ಗ್ರಾಮಸ್ಥರು ಹಾಗೂ ವಿರೋಧ ಪಕ್ಷಗಳು ತಳ್ಳಿ ಹಾಕಿವೆ. ಇದೀಗ ಈ ವಿಚಾರವು ವಿವಾದದ ಸ್ವರೂಪ ಪಡೆದುಕೊಂಡಿದೆ.
ಈ ಸಂಬಂಧ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರಣ್ಯದಂಚಿನಲ್ಲಿ ಹಸು ಹುಡುಕಲು ಹೋಗಿದ್ದ ಮೂವರು ಮುಗ್ಧ ರೈತರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬರ್ಬರವಾಗಿ ಗುಂಡಿಕ್ಕಿ ಕೊಂದಿರುವ ಘಟನೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಅರಣ್ಯ ಇಲಾಖೆಯ ದರ್ಪಕ್ಕೆ ಹಿಡಿದ ಕನ್ನಡಿಯಾಗಿದೆ.
Encounter: ಇದೊಂದು ನಕಲಿ ಎನ್ಕೌಂಟರ್ ಎಂದ ಜೆಡಿಎಸ್
ಇದೊಂದು ಸ್ಪಷ್ಟ 'ನಕಲಿ ಎನ್ಕೌಂಟರ್ (Fake Encounter)'. ಜೀವ ರಕ್ಷಣೆ ಮಾಡಬೇಕಾದವರೇ ಜೀವ ತೆಗೆಯುತ್ತಿರುವುದು ಎಂತಹ ದುರಂತ. ಅರಣ್ಯ ಇಲಾಖೆ ಅಧಿಕಾರಿಗಳು "ಇದು ಕಳ್ಳಬೇಟೆ, ಅವರು ನಮ್ಮ ಮೇಲೆ ಗುಂಡು ಹಾರಿಸಿದಾಗ ಆತ್ಮರಕ್ಷಣೆಗಾಗಿ ಶೂಟ್ ಮಾಡಿದೆವು" ಎಂದು ಕಟ್ಟುಕಥೆ ಹೆಣೆಯುತ್ತಿದ್ದಾರೆ. ಮೃತಪಟ್ಟವರು ಗುಂಡು ಹಾರಿಸಿದ್ದರೆ ಯಾವೊಬ್ಬ ಅರಣ್ಯ ಸಿಬ್ಬಂದಿಗೂ ಸಣ್ಣ ಗಾಯವೂ ಆಗಿಲ್ಲವೇಕೆ? ಹಿಡಿಯುವ ಉದ್ದೇಶವಿದ್ದಿದ್ದರೆ ಕಾಲಿಗೆ ಗುಂಡು ಹಾರಿಸಬಹುದಿತ್ತು, ಆದರೆ ನೇರವಾಗಿ ಎದೆ ಮತ್ತು ಕುತ್ತಿಗೆಗೆ ಗುಂಡು ಹಾರಿಸಿ ಕೊಲೆ ಮಾಡಿರುವುದು ವ್ಯವಸ್ಥಿತ ಸಂಚು!
ಘಟನಾ ಸ್ಥಳದಿಂದ ಮೃತದೇಹಗಳನ್ನು ಯಾವುದೇ ಕಾನೂನು ಪ್ರಕ್ರಿಯೆ (ಮಹಜರು) ಇಲ್ಲದೆ ಎತ್ತಿಕೊಂಡು ಬಂದಿರುವುದು ಅರಣ್ಯ ಇಲಾಖೆಯ ಬಹುದೊಡ್ಡ ತಪ್ಪು ಎಂದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರೇ ಒಪ್ಪಿಕೊಂಡಿದ್ದಾರೆ. ಇಷ್ಟೊಂದು ದೊಡ್ಡ ಘಟನೆ ನಡೆದರೂ ಸಚಿವರಿಗೆ ಇಲಾಖೆಯಿಂದ ಸರಿಯಾದ ಮಾಹಿತಿಯೇ ಇಲ್ಲ ಎಂದರೆ ರಾಜ್ಯದಲ್ಲಿ ಗುಪ್ತಚರ ಇಲಾಖೆ ಮತ್ತು ಗೃಹ ಇಲಾಖೆ ಸತ್ತುಹೋಗಿದೆಯೇ?
ನಮ್ಮ ಅರಣ್ಯ , ಪ್ರಾಣಿಗಳು ಉಳಿಯಬೇಕು ನಿಜ, ಆದರೆ ಅದರ ಹೆಸರಿನಲ್ಲಿ ಕಾಡನ್ನೇ ನಂಬಿ ಬದುಕುತ್ತಿರುವ ಸ್ಥಳೀಯರ, ಬಡ ರೈತರ ಮಾರಣಹೋಮ ನಡೆಯುವುದನ್ನು ಜೆಡಿಎಸ್ ಪಕ್ಷ ಎಂದಿಗೂ ಸಹಿಸುವುದಿಲ್ಲ. ರಾಜ್ಯ ಸರ್ಕಾರ ಕೂಡಲೇ ಈ ನಕಲಿ ಎನ್ಕೌಂಟರ್ ಬಗ್ಗೆ 'ಹಾಲಿ ಹೈಕೋರ್ಟ್ ನ್ಯಾಯಾಧೀಶರ' ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕು. ಸುಳ್ಳು ಕಥೆ ಕಟ್ಟಿ ಕೊಲೆ ಮಾಡಿದ, ಹಾಗೂ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತಕ್ಷಣವೇ FIR ದಾಖಲಿಸಿ ಬಂಧಿಸಬೇಕು. ಅರಣ್ಯಾಧಿಕಾರಿಗಳ ಗುಂಡಿಗೆ ಬಲಿಯಾದ ಮೂವರು ಅಮಾಯಕರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸುತ್ತೇವೆ ಎಂದೂ ಜೆಡಿಎಸ ಪಕ್ಷ ಹೇಳಿದೆ.