ಚಿತ್ರದುರ್ಗ ಶಾಖಾ ನಾಲೆಗೆ 3 ಟಿಎಂಸಿ ಅಡಿ ನೀರು

ಚಿತ್ರದುರ್ಗ ಶಾಖಾ ನಾಲೆಗೆ 3 ಟಿಎಂಸಿ ಅಡಿ ನೀರು

ಚಿತ್ರದುರ್ಗ ಶಾಖಾ ನಾಲೆಗೆ 3 ಟಿಎಂಸಿ ಅಡಿ ನೀರು

ಚಿತ್ರದುರ್ಗ: ಕೋಟೆನಾಡಿನ ಹಲವು ದಶಕಗಳ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ನಾಲೆಗೆ (ಸಿಬಿಸಿ) ಪ್ರಾಯೋಗಿಕವಾಗಿ 3 ಟಿಎಂಸಿ ಅಡಿ ನೀರು ಹರಿಸಲು ಸರ್ಕಾರ ಅನುಮತಿ ನೀಡಿರುವುದು ಜಿಲ್ಲೆಯ ಜನರಲ್ಲಿ ಹರ್ಷ ಮೂಡಿಸಿದೆ.

ಸಿಬಿಸಿ ನಾಲಾ ಕಾಮಗಾರಿ ಪೂರ್ಣಗೊಂಡ ಬಳಿಕ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ನೀರು ಹರಿಸುವ ಸಂಬಂಧ ಜಲಸಂಪನ್ಮೂಲ ಇಲಾಖೆ ಆ. 24ರಂದು ಆದೇಶ ಹೊರಡಿಸಿದೆ. ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಜುಲೈ 28ರಂದು ಪತ್ರ ಬರೆದು ಸಿಬಿಸಿ ಅಡಿ ಬರುವ ಕೆರೆಗಳು, ವಿ.ವಿ. ಸಾಗರ ಜಲಾಶಯ, ಚಿಕ್ಕಮಗಳೂರು ಜಿಲ್ಲೆಯ ಕಡೂರು ಭಾಗದ ಕೆರೆ ತುಂಬಿಸಲು 5.97 ಟಿಎಂಸಿ ಅಡಿ ನೀರು ಹರಿಸಲು ಅನುಮತಿ ಕೋರಿದ್ದರು.

ಈ ಸಂಬಂಧ ವರದಿ ನೀಡುವಂತೆ ಜಲಸಂಪನ್ಮೂಲ ಇಲಾಖೆಯು ಜಲಾಶಯ ನಿರ್ವಹಣೆ ಮಾಡುವ ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್‌)ದ ವ್ಯವಸ್ಥಾಪಕ ನಿರ್ದೇಶಕರಿಗೆ ಆ. 7ರಂದು ಸೂಚಿಸಿತ್ತು. ಆ. 10ರಂದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದ್ದು, ಜಲಾಶಯ ಭರ್ತಿಯಾದ ನಂತರ ಸಿಬಿಸಿಗೆ ನೀರು ಹರಿಸುವ ಅನುಮತಿ ನೀಡುವುದು ಸೂಕ್ತ ಎಂದು ತಿಳಿಸಿತ್ತು. ಇದನ್ನು ಪರಿಗಣಿಸಿರುವ ಸರ್ಕಾರ ಸಿಬಿಸಿಗೆ 3 ಟಿಎಂಸಿ ಅಡಿ ನೀರು ಹರಿಸಲು ಅನುಮತಿ ನೀಡಿ ಆದೇಶ ಹೊರಡಿಸಿದೆ.

ಜಲಾಶಯ ಭರ್ತಿಯಾದ ನಂತರ ನೀರು ಹರಿಸಲಾಗುತ್ತದೆಯೋ, ಅದಕ್ಕೂ ಮೊದಲೇ ನೀರು ಹರಿಸಬಹುದೋ ಎಂಬ ಬಗ್ಗೆ ಆದೇಶ ಸ್ಪಷ್ಟವಾಗಿಲ್ಲ. ಏಕೆಂದರೆ ಕೆಎನ್‌ಎನ್‌ ಅಧಿಕಾರಿಗಳು ನೀಡಿರುವ ವರದಿಯಲ್ಲಿ ಜಲಾಶಯ ಭರ್ತಿಯಾದ ನಂತರ ನೀರು ಹರಿಸಬಹುದು ಎಂಬ ಮಾಹಿತಿ ಸ್ಪಷ್ಟವಾಗಿದೆ. ಗೊಂದಲ ಏನೇ ಇದ್ದರೂ ನೀರು ಹರಿಸಲು ಆದೇಶ ನೀಡಿರುವುದು ಕೋಟೆನಾಡಿನ ಜನರ ಸಂಭ್ರಮಕ್ಕೆ ಕಾರಣವಾಗಿದೆ.

ಭದ್ರಾ ಜಲಾಶಯದ ನೀರಿನ ಮಟ್ಟ 176 ಅಡಿಗೆ ತಲುಪಿದ್ದು, ಭರ್ತಿಯಾಗಲು 10 ಅಡಿ ಬಾಕಿಯಿದೆ. ಸದ್ಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದೆ. ಸರ್ಕಾರದ ಆದೇಶವನ್ನು ಜಿಲ್ಲಾ ನೀರಾವರಿ ಹೋರಾಟ ಸಮಿತಿ, ಜಿಲ್ಲಾ ನೀರಾವರಿ ಅನುಷ್ಠಾನ ಸಮಿತಿ ಸ್ವಾಗತಿಸಿದ್ದು, ಸಂಭ್ರಮ ವ್ಯಕ್ತಪಡಿಸಿವೆ.

ಚಿತ್ರದುರ್ಗ ಶಾಖಾ ನಾಲೆಗೆ ನೀರು ಹರಿಸಿದರೆ ಕಡೂರು ಭಾಗದ ಕೆರೆಗಳಿಗೂ ನೀರು ಹರಿಯಲಿದೆ. ಆದರೆ, ವಿ.ವಿ. ಸಾಗರ ಜಲಾಶಯಕ್ಕೆ ನೀರು ಹರಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಚಿತ್ರದುರ್ಗ ಶಾಖಾ ನಾಲೆ 126.26 ಕಿ.ಮೀ. ಉದ್ದ ಇದೆ. ಸದ್ಯ 117ನೇ ಕಿ.ಮೀ ವರೆಗಿನ ಗೋನೂರು ಅಕ್ವಡೆಕ್ಟ್‌ವರೆಗೆ ನಾಲೆ ಕಾಮಗಾರಿ ಪೂರ್ಣಗೊಂಡಿದ್ದು, ಅಲ್ಲಿಯವರೆಗೆ ನೀರು ಹರಿಯಲಿದೆ.

‘ಸಿಬಿಸಿಗೆ ನೀರು ಹರಿಸುವುದಕ್ಕೆ ದಾವಣಗೆರೆ ಜಿಲ್ಲೆಯ ರೈತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭದ್ರಾ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಇನ್ನೂ ನೀರು ಹರಿಸಿಲ್ಲ. ಈ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಿ ಸಿಬಿಸಿಗೆ ನೀರು ಹರಿಸಬೇಕಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಆಮೆಗತಿ ಕಾಮಗಾರಿ ಮಧ್ಯೆಯೂ 3 ಟಿಎಂಸಿ ಅಡಿ ನೀರು ಹರಿಸಲು ಅನುಮತಿ ನೀಡಿರುವುದು ಸ್ವಾಗತಾರ್ಹ. ಭದ್ರಾ ಮೇಲ್ದಂಡೆ ಯೋಜನೆ 5 ದಶಕಗಳ ಹೋರಾಟದ ಫಲವಾಗಿದೆ. ಸರ್ಕಾರ ಕೂಡಲೇ ನೀರು ಹರಿಸುವ ದಿನಾಂಕ ನಿಗದಿ ಮಾಡಬೇಕು’ ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ, ಪ್ರಧಾನ ಸಂಚಾಲಕ ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ.

‘ತಡವಾಗಿಯಾದರೂ ನೀರು ಹರಿಯುತ್ತಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಹೊಳಲ್ಕೆರೆ, ಹೊಸದುರ್ಗ ತಾಲ್ಲೂಕಿನ ಹಲವು ಕೆರೆಗಳಿಗೆ ಪರೀಕ್ಷಾರ್ಥ ಹರಿಯುವಿಕೆಯಲ್ಲಿ ನೀರಿನ ಸ್ಪರ್ಶವಾಗಲಿದೆ’ ಎಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ತಿಳಿಸಿದರು.

ಸೆಪ್ಟೆಂಬರ್ ಮೊದಲ ವಾರ ವೇಳಾಪಟ್ಟಿ

‘ಚಿತ್ರದುರ್ಗ ಶಾಖಾ ನಾಲೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ನಿರ್ಧಾರ ಪ್ರಕಟಿಸಿದ ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿದ್ದೇವೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿ ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಭದ್ರೆಯ ಹರಿವಿಗೆ ಮುಖ್ಯಮಂತ್ರಿಯವರೇ ಚಾಲನೆ ನೀಡಲಿದ್ದಾರೆ. ಅದಕ್ಕಾಗಿ ಅವಕಾಶ ಕೋರಿದ್ದೇವೆ. ಅಂದು ಚಿತ್ರದುರ್ಗದಲ್ಲಿ ಬೃಹತ್‌ ಕಾರ್ಯಕ್ರಮ ನಡೆಯಲಿದ್ದು, ಉಪಮುಖ್ಯಮಂತ್ರಿ ಸೇರಿ ಸಚಿವ ಸಂಪುಟದ ಹಲವು ಸದಸ್ಯರು ಭಾಗಿಯಾಗಲಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-44-792020478

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ