ಕೈಕೊಟ್ಟ ಮಳೆರಾಯ: ಕರ್ನಾಟಕದಲ್ಲಿ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್; ₹28.52 ಕೋಟಿ ವೆಚ್ಚ

ಕೈಕೊಟ್ಟ ಮಳೆರಾಯ: ಕರ್ನಾಟಕದಲ್ಲಿ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್; ₹28.52 ಕೋಟಿ ವೆಚ್ಚ

ಕೈಕೊಟ್ಟ ಮಳೆರಾಯ: ಕರ್ನಾಟಕದಲ್ಲಿ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್; ₹28.52 ಕೋಟಿ ವೆಚ್ಚ

ಬೆಂಗಳೂರು: ಕರ್ನಾಟಕದಲ್ಲಿ ಮಳೆರಾಯ ಕೈಕೊಟ್ಟಿದ್ದಾನೆ.. ಮಳೆ ಕೊರತೆಯಿಂದ ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದಾನೆ.. ಬಿತ್ತನೆ ಮಾಡಿದ ಬೆಳೆಗಳು ಒಣಗುವ ಆತಂಕ, ಜಲಾಶಯಗಳಲ್ಲೂ ನೀರಿನ ಮಟ್ಟ ಕುಸಿತ.. ಹೀಗಾಗಿ ರೈತರ ನೆರವಿಗೆ ರಾಜ್ಯ ಸರ್ಕಾರ ಈಗ ವಿಜ್ಞಾನದ ಮೊರೆ ಹೋಗಿದೆ. ಮಳೆ ತರಿಸಲು ಮೋಡ ಬಿತ್ತನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಬರೋಬ್ಬರಿ 28.52 ಕೋಟಿ ರೂಪಾಯಿ ವೆಚ್ಚದಲ್ಲಿ, 60 ದಿನಗಳ ಕಾಲ, 200 ಗಂಟೆ ವೈಮಾನಿಕ ಹಾರಾಟ ನಡೆಸಿ ಕೃತಕ ಮಳೆ ಸುರಿಸುವ ಪ್ರಯತ್ನ ನಡೆಯಲಿದೆ.

ರಾಜ್ಯದಲ್ಲಿ ಮಳೆ ಕೊರತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮೋಡ ಬಿತ್ತನೆಗೆ ಅಧಿಕೃತವಾಗಿ ಮುಂದಾಗಿದೆ. 'ಕರ್ನಾಟಕ ತುರ್ತು ಮೋಡ ಬಿತ್ತನೆ ಕಾರ್ಯಕ್ರಮ-2026'ಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಒಟ್ಟು 60 ದಿನಗಳ ಕಾಲ ಕೃತಕ ಮಳೆ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಕೈಕೊಟ್ಟಿರುವ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಮಾಡಿದ ಬೆಳೆಗಳಿಗೆ ಅಗತ್ಯ ಪ್ರಮಾಣದ ಮಳೆ ಸಿಗದೆ ಒಣಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆರೆ-ಕಟ್ಟೆಗಳು ಹಾಗೂ ಜಲಾಶಯಗಳ ನೀರಿನ ಮಟ್ಟವೂ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆ ಕೊರತೆಯನ್ನು ನೀಗಿಸಲು ಸರ್ಕಾರ ಮೋಡ ಬಿತ್ತನೆಯನ್ನು ವೈಜ್ಞಾನಿಕ ಪರಿಹಾರವಾಗಿ ಬಳಸಲು ಮುಂದಾಗಿದೆ.

ಸರ್ಕಾರದ ಯೋಜನೆಯಂತೆ ಸುಮಾರು ₹28.52 ಕೋಟಿ ವೆಚ್ಚದಲ್ಲಿ 60 ದಿನಗಳ ಕಾಲ ಮೋಡ ಬಿತ್ತನೆ ಕಾರ್ಯಾಚರಣೆ ನಡೆಯಲಿದೆ. ವಿಶೇಷ ವಿಮಾನಗಳ ಮೂಲಕ ಮಳೆ ತರಬಲ್ಲ ಮೋಡಗಳಿರುವ ಪ್ರದೇಶಗಳಲ್ಲಿ ಸುಮಾರು 200 ಗಂಟೆಗಳ ಕಾಲ ಹಾರಾಟ ನಡೆಸಿ ಅಗತ್ಯ ರಾಸಾಯನಿಕಗಳನ್ನು ಸಿಂಪಡಿಸುವ ಯೋಜನೆ ರೂಪಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಲಬುರಗಿ, ಬೆಳಗಾವಿ ಹಾಗೂ ಬೆಂಗಳೂರು ಪ್ರಾದೇಶಿಕ ವಿಭಾಗಗಳಲ್ಲಿ ನಡೆಸಿದ ಸಭೆಗಳಲ್ಲಿ ಜನಪ್ರತಿನಿಧಿಗಳು ಮೋಡ ಬಿತ್ತನೆಗೆ ಒತ್ತಾಯಿಸಿದ್ದರು. ರೈತರ ಹಿತದೃಷ್ಟಿಯಿಂದ ಇದೀಗ ಸರ್ಕಾರ ಯೋಜನೆಗೆ ಅನುಮೋದನೆ ನೀಡಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಪ್ರಕಾರ, ರಾಜ್ಯದ 31 ಜಿಲ್ಲೆಗಳ ಪೈಕಿ 27 ಜಿಲ್ಲೆಗಳ 178 ತಾಲೂಕುಗಳಲ್ಲಿ ಮಳೆ ಕೊರತೆ ಕಂಡುಬಂದಿದೆ. ಹೀಗಾಗಿ ಮಳೆ ಅಭಾವ ಹೆಚ್ಚಿರುವ ತಾಲೂಕುಗಳಿಗೆ ಮೋಡ ಬಿತ್ತನೆ ಕಾರ್ಯಾಚರಣೆಯಲ್ಲಿ ಆದ್ಯತೆ ನೀಡಲಾಗುತ್ತದೆ. ಜೂನ್ ಅಂತ್ಯಕ್ಕೆ ರಾಜ್ಯದಲ್ಲಿ ಶೇ.42ರಷ್ಟು ಮಳೆ ಕೊರತೆ ದಾಖಲಾಗಿತ್ತು. ಜುಲೈ ಅಂತ್ಯಕ್ಕೆ ಕೊರತೆ ಶೇ.29ರಷ್ಟಿತ್ತು. ಹಲವು ಜಿಲ್ಲೆಗಳಲ್ಲಿ ಮಳೆ ಅಭಾವ ಮುಂದುವರಿದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ವಿಶೇಷ ಕಾರ್ಯಾಚರಣೆಗೆ ಮುಂದಾಗಿದೆ.

ಮೋಡ ಬಿತ್ತನೆ ಹೇಗೆ ನಡೆಯುತ್ತದೆ?

ಮೋಡ ಬಿತ್ತನೆ ವೇಳೆ ಮಳೆ ಸುರಿಸುವ ಸಾಮರ್ಥ್ಯ ಹೊಂದಿರುವ ಮೋಡಗಳಿಗೆ ಸೂಕ್ತ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ. ಸಿಲ್ವರ್ ಅಯೋಡೈಡ್ ಅಥವಾ ಸೋಡಿಯಂ ಕ್ಲೋರೈಡ್‌ನಂತಹ ಕ್ಲೌಡ್ ಸೀಡಿಂಗ್ ಏಜೆಂಟ್‌ಗಳನ್ನು ವಿಮಾನದ ಮೂಲಕ ಮೋಡಗಳಿಗೆ ತಲುಪಿಸಲಾಗುತ್ತದೆ. ಇದರಿಂದ ಮೋಡದಲ್ಲಿರುವ ನೀರಿನ ಹನಿಗಳು ದೊಡ್ಡದಾಗಿ ರೂಪುಗೊಂಡು ಮಳೆಯಾಗಿ ಬೀಳಲು ಉತ್ತೇಜನ ಸಿಗುತ್ತದೆ. ಆದರೆ ಮೋಡ ಬಿತ್ತನೆಯಿಂದ ಖಾಲಿ ಆಕಾಶದಲ್ಲಿ ಮಳೆ ಸೃಷ್ಟಿಸಲು ಸಾಧ್ಯವಿಲ್ಲ. ಮಳೆ ಸುರಿಯುವಷ್ಟು ತೇವಾಂಶ ಹೊಂದಿರುವ ಸೂಕ್ತ ಮೋಡಗಳು ಇರುವುದು ಅತ್ಯಗತ್ಯ.

KSNDMC, ಕಾವೇರಿ ನೀರಾವರಿ ನಿಗಮದ ಜವಾಬ್ದಾರಿ

ಈ ಯೋಜನೆಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮತ್ತು ಕಾವೇರಿ ನೀರಾವರಿ ನಿಗಮ ಜಂಟಿಯಾಗಿ ನಿರ್ವಹಿಸಲಿವೆ. KSNDMC ಯೋಜನೆಯ ವೈಜ್ಞಾನಿಕ ಮೇಲ್ವಿಚಾರಣೆ, ತಾಂತ್ರಿಕ ಚಟುವಟಿಕೆಗಳು ಹಾಗೂ ಕಾರ್ಯಾಚರಣೆಯ ನಂತರದ ಮೌಲ್ಯಮಾಪನವನ್ನು ನೋಡಿಕೊಳ್ಳಲಿದೆ. ಯಾವ ಪ್ರದೇಶದಲ್ಲಿ ಸೂಕ್ತ ಮೋಡಗಳಿವೆ, ಎಲ್ಲಿ ಮೋಡ ಬಿತ್ತನೆ ನಡೆಸಬೇಕು ಹಾಗೂ ಕಾರ್ಯಾಚರಣೆಯಿಂದ ಮಳೆಯಾಗಿದೆಯೇ ಎಂಬುದನ್ನು ಪರಿಶೀಲಿಸುವ ಜವಾಬ್ದಾರಿಯೂ ಇದರ ಮೇಲಿದೆ. ಕಾವೇರಿ ನೀರಾವರಿ ನಿಗಮ ಯೋಜನೆಯ ಆಡಳಿತಾತ್ಮಕ ಮತ್ತು ಆರ್ಥಿಕ ನಿರ್ವಹಣೆಯನ್ನು ನೋಡಿಕೊಳ್ಳಲಿದೆ.

ಯಾವ ಜಿಲ್ಲೆಗಳಲ್ಲಿ ಮಳೆ ಕೊರತೆ ಹೆಚ್ಚು?

ರಾಜ್ಯದ ಹಲವು ಜಿಲ್ಲೆಗಳಲ್ಲಿ ತೀವ್ರ ಮಳೆ ಅಭಾವವಿದೆ. ವಿಜಯನಗರ ಜಿಲ್ಲೆಯಲ್ಲಿ ಶೇ.67ರಷ್ಟು ಮಳೆ ಕೊರತೆ ದಾಖಲಾಗಿದ್ದು, ಅತ್ಯಂತ ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಶೇ.56, ದಾವಣಗೆರೆಯಲ್ಲಿ ಶೇ.52, ಬೀದರ್ ಮತ್ತು ಹಾವೇರಿಯಲ್ಲಿ ಶೇ.51ರಷ್ಟು ಮಳೆ ಕೊರತೆ ಕಂಡುಬಂದಿದೆ. ಶಿವಮೊಗ್ಗದಲ್ಲಿ ಶೇ.44, ಕೊಡಗಿನಲ್ಲಿ ಶೇ.45, ಚಿಕ್ಕಮಗಳೂರಿನಲ್ಲಿ ಶೇ.43 ಹಾಗೂ ಹಾಸನದಲ್ಲಿ ಶೇ.32ರಷ್ಟು ಕೊರತೆ ಇದೆ.

ಉತ್ತರ ಕರ್ನಾಟಕ ಭಾಗದಲ್ಲಿ ಒಟ್ಟಾರೆ ಶೇ.33ರಷ್ಟು ಮಳೆ ಕೊರತೆ ದಾಖಲಾಗಿದ್ದು, ಕಲಬುರಗಿ, ಕೊಪ್ಪಳ, ಧಾರವಾಡ, ಯಾದಗಿರಿ, ರಾಯಚೂರು ಮತ್ತು ಗದಗ ಜಿಲ್ಲೆಗಳಲ್ಲಿ ಶೇ.28ರಿಂದ ಶೇ.39ರಷ್ಟು ಮಳೆ ಅಭಾವವಿದೆ. ಬೆಳಗಾವಿಯಲ್ಲಿ ಶೇ.7 ಮತ್ತು ವಿಜಯಪುರದಲ್ಲಿ ಶೇ.15ರಷ್ಟು ಕೊರತೆ ಮಾತ್ರ ದಾಖಲಾಗಿದ್ದು, ಈ ಜಿಲ್ಲೆಗಳಲ್ಲಿ ಪರಿಸ್ಥಿತಿ ತುಸು ಉತ್ತಮವಾಗಿದೆ. ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲೂ ಶೇ.13ರಷ್ಟು ಮಳೆ ಕೊರತೆ ಇದೆ.

karnataka government dk shivakumar monsoon

karnataka government dk shivakumar monsoon

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ