
ದೆಹಲಿ.ಜುಲೈ.22: ಮಾಜಿ ಅಗ್ನಿವೀರರಿಗೆ ಕೇಂದ್ರ ಗೃಹ ಸಚಿವಾಲಯವು ಬೃಹತ್ ರಿಲೀಫ್ ಒಂದನ್ನು ನೀಡಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPF) ಹಾಗೂ ಅಸ್ಸಾಂ ರೈಫಲ್ಸ್‌ನ ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ) ಮತ್ತು ರೈಫಲ್‌ಮ್ಯಾನ್ ಹುದ್ದೆಗಳ ನೇಮಕಾತಿಯಲ್ಲಿ ನಿವೃತ್ತ ಅಗ್ನಿವೀರರಿಗೆ ಶೇಕಡಾ 50 ರಷ್ಟು ಮೀಸಲಾತಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಇದರೊಂದಿಗೆ, ಅವರಿಗೆ ಲಿಖಿತ ಪರೀಕ್ಷೆ, ದೈಹಿಕ ಮಾನದಂಡ ಪರೀಕ್ಷೆ (PST) ಹಾಗೂ ದೈಹಿಕ ದಕ್ಷತಾ ಪರೀಕ್ಷೆ (PET) ಯಿಂದ ಸಂಪೂರ್ಣ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.
ಸಂಸದ ಜನಾರ್ದನ್ ಸಿಂಗ್ ಸಿಗ್ರಿವಾಲ್ ಅವರ ಪ್ರಶ್ನೆಗೆ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಗೃಹ ರಾಜ್ಯ ಸಚಿವ ನಿತ್ಯಾನಂದ ರೈ, ಸಿಎಪಿಎಫ್ ಹಾಗೂ ಅಸ್ಸಾಂ ರೈಫಲ್ಸ್ ನೇಮಕಾತಿಯಲ್ಲಿ “ಮಾಜಿ ಅಗ್ನಿವೀರರು” ಎಂಬ ಹೊಸ ವರ್ಗವನ್ನೇ ಸೃಷ್ಟಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ 2023ರ ಮಾರ್ಚ್‌ನಲ್ಲಿ ಗೃಹ ಸಚಿವಾಲಯವು ಮಾಜಿ ಅಗ್ನಿವೀರರಿಗೆ ಶೇ. 10 ರಷ್ಟು ಮೀಸಲಾತಿ ಮತ್ತು ದೈಹಿಕ ಪರೀಕ್ಷೆಯಿಂದ ಮಾತ್ರ ವಿನಾಯಿತಿ ನೀಡಿ ಆದೇಶಿಸಿತ್ತು. ಆದರೆ ಈಗ ಸಿಐಎಸ್ಎಫ್ ಹಾಗೂ ಬಿಎಸ್ಎಫ್ ಮುಂತಾದ ಪಡೆಗಳ ಪ್ರಸ್ತಾವನೆಯಂತೆ ಮೀಸಲಾತಿಯನ್ನು ಶೇ. 50ಕ್ಕೆ ಹೆಚ್ಚಿಸಲಾಗಿದ್ದು, ಲಿಖಿತ ಪರೀಕ್ಷೆಯನ್ನೂ ರದ್ದುಗೊಳಿಸಲಾಗಿದೆ.
ಅಲ್ಲದೆ, ಗರಿಷ್ಠ ವಯೋಮಿತಿಯಲ್ಲಿ ಮಾಜಿ ಅಗ್ನಿವೀರರಿಗೆ 3 ವರ್ಷಗಳ ವಿನಾಯಿತಿ ಸಿಗಲಿದ್ದು, ಮೊದಲ ಬ್ಯಾಚ್‌ನ ಅಗ್ನಿವೀರರಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ಇರಲಿದೆ. ಅಗ್ನಿವೀರರ ಮುಂದಿನ ವೃತ್ತಿಜೀವನದ ಸಮನ್ವಯಕ್ಕಾಗಿ ಗೃಹ ಸಚಿವಾಲಯದ ಅಡಿಯಲ್ಲಿ ಪ್ರತ್ಯೇಕ ‘ಮಾಜಿ ಅಗ್ನಿವೀರರ ವಿಭಾಗ’ವನ್ನು ಕೂಡ ಸ್ಥಾಪಿಸಲಾಗಿದೆ.
ಲಿಖಿತ ಮತ್ತು ದೈಹಿಕ ಪರೀಕ್ಷೆಗಳಿಂದ ವಿನಾಯಿತಿ ನೀಡಿರುವುದರಿಂದ, ಅಭ್ಯರ್ಥಿಗಳನ್ನು ಯಾವ ಅರ್ಹತೆಯ (Merit) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಸರ್ಕಾರವಿನ್ನೂ ಪ್ರಕಟಿಸಬೇಕಿದೆ. ನವೆಂಬರ್ 2022 ರಲ್ಲಿ ನೌಕಾಪಡೆಗೆ ಸೇರ್ಪಡೆಗೊಂಡ ಸುಮಾರು 2,600 ಅಗ್ನಿವೀರರ ಮೊದಲ ಬ್ಯಾಚ್ ಈ ವರ್ಷದ ಕೊನೆಯಲ್ಲಿ ಸೇವಾಧಿ ಮುಗಿಸಿ ಹೊರಬರಲಿದ್ದು, ಸಿಎಪಿಎಫ್ ಸೇರಲು ಅರ್ಹತೆ ಪಡೆಯಲಿದೆ. ಅಷ್ಟೇ ಅಲ್ಲದೆ ಹರಿಯಾಣ, ದೆಹಲಿ ಮತ್ತು ರಾಜಸ್ಥಾನ ರಾಜ್ಯ ಪೊಲೀಸ್ ಪಡೆಗಳು ಸಹ ಮಾಜಿ ಅಗ್ನಿವೀರರಿಗೆ ಶೇ. 20 ರಷ್ಟು ಮೀಸಲಾತಿಯನ್ನು ಘೋಷಿಸಿವೆ.


source https://suddione.com/good-news-for-former-firefighters-50-reservation-in-capf-exemption-from-written-exam/

0 Comments
If u have any queries, Please let us know