ವೃದ್ಧಾಪ್ಯ ವೇತನ ಪಡೆಯಲು ಹೋದ ತಂದೆ-ಮಗನ ಖಾತೆಯಲ್ಲಿ 1,500 ಕೋಟಿ ರೂ; ಬ್ಯಾಲೆನ್ಸ್ ನೋಡಿ ದಂಗಾದ ಸಿಬ್ಬಂದಿ!

ಮುಜಾಫರ್ಪುರ (ಬಿಹಾರ).ಜುಲೈ.13: ಬ್ಯಾಂಕಿಂಗ್ ವ್ಯವಸ್ಥೆಯ ಲೋಪದೋಷಗಳು ಆಗಾಗ ಜನರನ್ನು ಅಚ್ಚರಿಯಲ್ಲಿ ಮುಳುಗಿಸುತ್ತವೆ. ಇಂತಹದ್ದೇ ಒಂದು ನಂಬಲಸಾಧ್ಯವಾದ ಘಟನೆ ಬಿಹಾರದ ಮುಜಾಫರ್ಪುರ ಜಿಲ್ಲೆಯಲ್ಲಿ ನಡೆದಿದೆ. ವೃದ್ಧಾಪ್ಯ ವೇತನ ಮತ್ತು ವಿಕಲಾಂಗ ಚೇತನರ ವೇತನ ಪಡೆಯಲು ಬ್ಯಾಂಕ್ ಗೆ ಹೋದ ತಂದೆ ಮತ್ತು ಮಗನ ಬ್ಯಾಂಕ್ ಖಾತೆಗಳಲ್ಲಿ ಹಠಾತ್ತಾಗಿ ಬರೋಬ್ಬರಿ 1500 ಕೋಟಿ ರೂಪಾಯಿ ಬ್ಯಾಲೆನ್ಸ್ ಕಾಣಿಸಿಕೊಂಡು ಇಡೀ ಗ್ರಾಮವೇ ಬೆಚ್ಚಿಬೀಳುವಂತೆ ಮಾಡಿದೆ.

ಜಿಲ್ಲೆಯ ಸಕ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಥತಿಯಾ ಸೀಹೋ ಗ್ರಾಮದ ನಿವಾಸಿ ಕಾಮೇಶ್ವರ್ ಮಿಶ್ರಾ (ಸ್ಥಳೀಯವಾಗಿ ‘ಘೂಮ್ಕರ್’ ಎಂದು ಕರೆಯಲ್ಪಡುವ ಕವಿ) ಮತ್ತು ಅವರ ದಿವ್ಯಾಂಗ ಮಗನ ಖಾತೆಗಳಲ್ಲೇ ಈ ಭಾರೀ ಮೊತ್ತ ಜಮೆಯಾಗಿದೆ.

ಕಾಮೇಶ್ವರ್ ಮಿಶ್ರಾ ಅವರು ತಮ್ಮ ಗ್ರಾಮದ ಕೇಂದ್ರ ಸರ್ಕಾರದ ಡಿಜಿಟಲ್ ಸೇವಾ ಕೇಂದ್ರಕ್ಕೆ ವೃದ್ಧಾಪ್ಯ ವೇತನದ ಹಣವನ್ನು ಹಿಂಪಡೆಯಲು ಹೋಗಿದ್ದರು. ಅವರೊಂದಿಗೆ ವಿಕಲಾಂಗ ಚೇತನರ ಪಿಂಚಣಿ ಪಡೆಯುವ ಅವರ ಮಗನೂ ಇದ್ದನು. ಪಿಂಚಣಿ ಹಣವನ್ನು ಡ್ರಾ ಮಾಡಿದ ನಂತರ, ಕಾಮೇಶ್ವರ್ ಅವರು ತಮ್ಮ ಖಾತೆಯಲ್ಲಿ ಇನ್ನು ಎಷ್ಟು ಹಣ ಬಾಕಿ ಇದೆ ಎಂದು ಬ್ಯಾಲೆನ್ಸ್ ಪರಿಶೀಲಿಸಿದ್ದಾರೆ.

ಬ್ಯಾಲೆನ್ಸ್ ಚೆಕ್ ಮಾಡಿದಾಗ ಅವರ ಖಾತೆಯಲ್ಲಿ ಬರೋಬ್ಬರಿ 7,59,69,51,951 ರೂಪಾಯಿ (ಸುಮಾರು 7.59 ಶತಕೋಟಿ ರೂ.) ಇರುವುದು ಕಂಡುಬಂದಿದೆ. ಇದೇ ವೇಳೆ ಅವರ ದಿವ್ಯಾಂಗ ಮಗನ ಖಾತೆಯನ್ನು ಪರಿಶೀಲಿಸಿದಾಗಲೂ ಅಷ್ಟೇ ಮೊತ್ತದ ಹಣ ಕಾಣಿಸಿಕೊಂಡಿದೆ. ಒಟ್ಟಾರೆಯಾಗಿ ತಂದೆ-ಮಗ ಇಬ್ಬರ ಖಾತೆ ಸೇರಿ ಸುಮಾರು 15 ಶತಕೋಟಿ (1,500 ಕೋಟಿ ರೂ.) ರೂಪಾಯಿ ಬ್ಯಾಲೆನ್ಸ್ ತೋರಿಸಿದೆ. ಇದನ್ನು ಕಂಡು ಸ್ವತಃ ಕಾಮೇಶ್ವರ್ ಕುಟುಂಬ ಮತ್ತು ಸಿಎಸ್ಸಿ ಕೇಂದ್ರದ ಆಪರೇಟರ್ ಇಬ್ಬರೂ ಒಂದು ಕ್ಷಣ ದಂಗಾಗಿದ್ದಾರೆ.

ತಮ್ಮ ಖಾತೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತ ಕಾಣಿಸಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಕಾಮೇಶ್ವರ್ ಮಿಶ್ರಾ, “ನಾನು ಸಾಮಾನ್ಯ ಜೀವನ ನಡೆಸುವ ವ್ಯಕ್ತಿ. ನನ್ನ ಮತ್ತು ನನ್ನ ಮಗನ ಖಾತೆಗೆ ಇಷ್ಟೊಂದು ಕೋಟಿ ರೂಪಾಯಿಗಳು ಹೇಗೆ ಬಂದವು ಎಂಬುದು ನಮಗೆ ಅರ್ಥವಾಗುತ್ತಿಲ್ಲ,” ಎಂದು ಹೇಳಿದ್ದಾರೆ. ಕೂಡಲೇ ಬ್ಯಾಂಕ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಯು ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಖಾತೆಯ ಸರಿಯಾದ ಬ್ಯಾಲೆನ್ಸ್ ಅನ್ನು ನಮಗೆ ತೋರಿಸಬೇಕು ಎಂದು ಅವರು ವಿನಂತಿಸಿದ್ದಾರೆ.

ಖಾತೆಗಳಲ್ಲಿ ಇಷ್ಟು ದೊಡ್ಡ ಮೊತ್ತದ ಹಣ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳಲು ನಿಖರ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ, ಇದು ಬ್ಯಾಂಕಿಂಗ್ ಸಾಫ್ಟ್ ವೇರ್ ನ ತಾಂತ್ರಿಕ ದೋಷ ಅಥವಾ ಸಿಸ್ಟಮ್ ಗ್ಲಿಚ್ ಇರಬಹುದು ಎಂದು ಶಂಕಿಸಲಾಗಿದೆ. ಈ ನಿಗೂಢ ಹಣದ ವರ್ಗಾವಣೆಯ ಕುರಿತು ಬ್ಯಾಂಕ್ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ.



source https://suddione.com/rs-1500-crore-in-father-son-account-when-they-went-to-collect-old-age-pension-staff-members-riot-after-seeing-the-balance/

Post a Comment

0 Comments