
ದೇಶದ ತೈಲ ಮತ್ತು ಇಂಧನ ವಲಯಕ್ಕೆ ಮಹತ್ವದ ನಿರಾಳತೆ ನೀಡುವ ಕ್ರಮವಾಗಿ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಹಾಗೂ ಏವಿಯೇಷನ್ ಟರ್ಬೈನ್ ಫ್ಯುಯೆಲ್ (ಎಟಿಎಫ್) ಸೇರಿದಂತೆ ರಫ್ತು ಮಾಡಲಾಗುವ ತೈಲ ಉತ್ಪನ್ನಗಳ ಮೇಲಿನ ವಿಂಡ್‌ಫಾಲ್ ಗೇನ್ಸ್ ತೆರಿಗೆಯನ್ನು ಗಣನೀಯವಾಗಿ ಕಡಿತಗೊಳಿಸಿದೆ. ಪರಿಷ್ಕೃತ ತೆರಿಗೆ ದರಗಳು ಜೂನ್ 1ರಿಂದ ಜಾರಿಗೆ ಬರಲಿವೆ.
ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (SAED) ಪ್ರತಿ ಲೀಟರ್‌ಗೆ ₹1.5ಕ್ಕೆ ಇಳಿಸಲಾಗಿದೆ. ಡೀಸೆಲ್ ರಫ್ತಿನ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ ₹13.5ಕ್ಕೆ ಕಡಿತಗೊಳಿಸಲಾಗಿದ್ದು, ಎಟಿಎಫ್ ರಫ್ತಿನ ಮೇಲಿನ ತೆರಿಗೆ ದರವನ್ನು ಪ್ರತಿ ಲೀಟರ್‌ಗೆ ₹9.5 ನಿಗದಿಪಡಿಸಲಾಗಿದೆ.ಇದರ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ರಫ್ತಿನ ಮೇಲಿನ ರಸ್ತೆ ಮತ್ತು ಮೂಲಸೌಕರ್ಯ ಉಪಕರ (ಸೆಸ್) ಅನ್ನು ಸಂಪೂರ್ಣವಾಗಿ ಶೂನ್ಯಕ್ಕೆ ಇಳಿಸಲಾಗಿದ್ದು, ರಫ್ತು ಮಾಡುವ ತೈಲ ಕಂಪನಿಗಳ ಮೇಲಿನ ತೆರಿಗೆ ಹೊರೆ ಮತ್ತಷ್ಟು ಕಡಿಮೆಯಾಗಿದೆ.
ಆದರೆ ಈ ತೆರಿಗೆ ಪರಿಷ್ಕರಣೆಯು ದೇಶೀಯ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ದೊರೆಯುವ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ದೇಶೀಯ ಬಳಕೆಯ ಇಂಧನಗಳ ಮೇಲಿನ ಅಬಕಾರಿ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.ಜಾಗತಿಕ ಕಚ್ಚಾ ತೈಲ ಬೆಲೆಗಳ ಏರಿಳಿತ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ವಿಂಡ್‌ಫಾಲ್ ತೆರಿಗೆ ದರಗಳನ್ನು ಕಾಲಕಾಲಕ್ಕೆ ಪರಿಷ್ಕರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ತೆರಿಗೆ ಇಳಿಕೆಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ತೈಲ ಕಂಪನಿಗಳ ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದರ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ತೈಲ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.












source https://suddione.com/big-relief-from-the-center-for-oil-companies-from-june-1/

0 Comments
If u have any queries, Please let us know