ದೆಹಲಿಯಲ್ಲಿ ಸೋನಿಯಾ-ರಾಹುಲ್ ಭೇಟಿಯಾದ ‘ಸಿದ್ದರಾಮಯ್ಯ’, ಮುಂದಿನ ಮುಖ್ಯಮಂತ್ರಿ ಯಾರು?

 

ಸುದ್ದಿಒನ್,​ ನವದೆಹಲಿ, ಮೇ.29: ಕರ್ನಾಟಕ ರಾಜಕೀಯದಲ್ಲಿ ಭಾರಿ ಹೈಡ್ರಾಮಾ ಶುರುವಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಹೈಕಮಾಂಡ್ ಜೊತೆಗಿನ ಮುಂಚಿನ ಅಧಿಕಾರ ಹಂಚಿಕೆ ಸೂತ್ರದ ಹಿನ್ನೆಲೆಯಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದ್ದು, ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಈಗಾಗಲೇ ಅಂಗೀಕರಿಸಿದ್ದಾರೆ.

​ರಾಜೀನಾಮೆ ಪರ್ವ ಮುಗಿಯುತ್ತಿದ್ದಂತೆ ದೆಹಲಿಗೆ ಹಾರಿದ ಸಿದ್ದರಾಮಯ್ಯ, ಇಂದು ಕಾಂಗ್ರೆಸ್ ಹೈಕಮಾಂಡ್ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು. ನವದೆಹಲಿಯ 10 ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇಬ್ಬರನ್ನೂ ಭೇಟಿಯಾಗಿ ಮಾತುಕತೆ ನಡೆಸಿದರು.
​ತಮಗೆ ಸಿಎಂ ಆಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಉಭಯ ನಾಯಕರಿಗೂ ಸಿದ್ದರಾಮಯ್ಯ ಧನ್ಯವಾದ ಅರ್ಪಿಸಿದರು. ಈ ಭೇಟಿಯ ವೇಳೆ ರಾಜ್ಯದ ಮುಂದಿನ ರಾಜಕೀಯ ನಡೆಗಳ ಕುರಿತು ಮೂವರೂ ನಾಯಕರು ಕೆಲಕಾಲ ಗಹನವಾದ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

​ಸೋನಿಯಾ ಮತ್ತು ರಾಹುಲ್ ಭೇಟಿಯ ನಂತರ, ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಲಿದ್ದಾರೆ. ಇದೇ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ದೆಹಲಿ ತಲುಪಿದ್ದು, ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಸಜ್ಜಾಗಿದ್ದಾರೆ.

​ಮುಂದಿನ ಸಿಎಂ ಯಾರು? ನಾಳೆ ಅಧಿಕೃತ ಘೋಷಣೆ!
ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ. ನಾಳೆ (ಶನಿವಾರ) ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ನೂತನ ಮುಖ್ಯಮಂತ್ರಿಯ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.



source https://suddione.com/siddaramaiah-who-met-sonia-rahul-in-delhi-who-will-be-the-next-chief-minister/

Post a Comment

0 Comments