ಖಾಸಗಿ ಹಣಕಾಸು ಸಂಸ್ಥೆಗಳು ಹೆಚ್ಚಿನ ಬಡ್ಡಿಗೆ ಸಾಲ ನೀಡಿ, ನಂತರ ಸಾಲಗಾರರಿಗೆ ಕಿರುಕುಳ ನೀಡುವ ಪ್ರಕರಣಗಳು ಈಗ ಹೆಚ್ಚಾಗಿ ಸುದ್ದಿಯಾಗಿದ್ದವು. ಅದರಲ್ಲೂ, ಗ್ರಾಮೀಣ ಭಾಗದ ರೈತರು ಸಾಲ ಮರುಪಾವತಿ ಮಾಡಲು ಆಗದೆ, ಹಣಕಾಸು ಸಂಸ್ಥೆಗಳ ಕಿರುಕುಳಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಹೆಚ್ಚಾಗುತ್ತಿವೆ.
ಸಾಲ ವಸೂಲಾತಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಕಠಿಣ ನಿಯಮಗಳನ್ನು ರೂಪಿಸಿದೆ. ಇದರಿಂದಾಗಿ ಸಾಲಗಾರರಿಗೆ ಕೆಲ ಸುರಕ್ಷತೆಗಳು ಸಿಗಲಿವೆ.ಸಣ್ಣ ಹಣಕಾಸು ಬ್ಯಾಂಕ್ ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ ಬಿ ಎಫ್ ಸಿ), ಸ್ಥಳೀಯ ಬ್ಯಾಂಕ್ ಗಳು, ನಗರ ಸಹಕಾರಿ ಬ್ಯಾಂಕ್ ಗಳಿಗೆ ಹೊಸ ನಿಯಮಗಳು ಅನ್ವಯವಾಗುತ್ತವೆ. ಹೊಸ ನಿಯಮಗಳು 2026ರ ಜುಲೈ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ.
ಸಾಲಗಾರರಿಗೆ ಬೆಳಗ್ಗೆ 8ರಿಂದ ಸಂಜೆ 7ಗಂಟೆಯೊಳಗೆ ಮಾತ್ರ ಸಾಲ ವಸೂಲಿಗಾಗಿ ಕರೆ ಮಾಡಬೇಕು. ಸಂಜೆ 7 ಗಂಟೆ ನಂತರ ಕರೆ ಮಾಡುವ ಹಾಗಿಲ್ಲ.ಸಾಲ ಪಡೆದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಹಾಗಿಲ್ಲ. ಮನಸ್ಸಿಗೆ ಬಂದ ಹಾಗೆ, ಕೆಟ್ಟ ಪದಗಳಿರುವ ಸಂದೇಶಗಳನ್ನು ಕಳುಹಿಸುವಂತಿಲ್ಲ. ಬೆದರಿಕೆ ಹಾಕುವಂತಿಲ್ಲ.
ಸಾಲಗಾರ ಮನೆಯಲ್ಲಿ ಮದುವೆಯಂತಹ ಸಮಾರಂಭಗಳು ನಡೆಯುತ್ತಿದ್ದರೆ, ಅವರ ಮನೆಯಲ್ಲಿ ಯಾರಾದರೂ ಮೃತಪಟ್ಟಿದ್ದಾಗ ಸೇರಿ ವಿವಿಧ ಸಂದರ್ಭಗಳಲ್ಲಿ ತೆರಳಿ ಸಾಲ ಮರುಪಾವತಿಗೆ ಆಗ್ರಹಿಸುವಂತಿಲ್ಲ. ಸಾಲಗಾರರ ಮನೆಗೆ ವಸೂಲಿ ಸಿಬ್ಬಂದಿಯು ತೆರಳಿ ಸಾಲ ಕೇಳಬಹುದು. ಆದರೆ, ಸಾಲಗಾರನ ಸಂಬಂಧಿಕರ ಮನೆಗೆ ತೆರಳುವುದು, ಅವರಿಗೆ ಸಾಲದ ವಿಷಯ ತಿಳಿಸುವಂತಿಲ್ಲ.


source https://suddione.com/reserve-bank-implements-new-rules-for-debt-recovery/


0 Comments
If u have any queries, Please let us know