ಬಲರಾಮ್ ಜಾಖಡ್ ನಂತರ ಎರಡನೇ ಬಾರಿಗೆ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ

 

ಸುದ್ದಿಒನ್, ನವದೆಹಲಿ, ಜೂ.26 : ಓಂ ಬಿರ್ಲಾ ಅವರು ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ರಾಜಸ್ಥಾನದ ಕೋಟಾ ಸಂಸತ್ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾದ ಓಂ ಬಿರ್ಲಾ ಅವರು ಎರಡನೇ ಬಾರಿಗೆ ಲೋಕಸಭಾ ಸ್ಪೀಕರ್ ಹುದ್ದೆಯನ್ನು ಅಲಂಕರಿಸಿದರು. ಎರಡನೇ ಅವಧಿಗೆ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದ ಎರಡನೇ ವ್ಯಕ್ತಿ ಓಂ ಬಿರ್ಲಾ.

ಅದಕ್ಕೂ ಮುನ್ನ ಬಲರಾಮ್ ಜಾಖಡ್ ಮಾತ್ರ ಸತತ ಎರಡು ಅವಧಿಗೆ ಸ್ಪೀಕರ್ ಹುದ್ದೆಯಲ್ಲಿದ್ದರು. ಅವರು ಜನವರಿ 1980 ರಿಂದ ಡಿಸೆಂಬರ್ 1989 ರವರೆಗೆ (ಏಳನೇ ಮತ್ತು ಎಂಟನೇ) ಲೋಕಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. ಸಾಮೂಹಿಕ ಧ್ವನಿ ಮತದ ಮೂಲಕ ಸ್ಪೀಕರ್ ಆಗಿ ಆಯ್ಕೆಯಾದ ಓಂ ಬಿರ್ಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜುಜು ಅವರು ಸ್ಪೀಕರ್ ಸ್ಥಾನಕ್ಕೆ ಕರೆದೊಯ್ದು ಕೂರಿಸಿದರು.

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಒಮ್ಮತ ಮೂಡದ ಕಾರಣ ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ಅನಿವಾರ್ಯವಾಗಿತ್ತು. ಎನ್‌ಡಿಎಯಿಂದ ಓಂ ಬಿರ್ಲಾ ಮತ್ತು ಇಂಡಿಯಾ ಅಲಯನ್ಸ್‌ನಿಂದ ಕಾಂಗ್ರೆಸ್ ಸಂಸದ ಕೆ ಸುರೇಶ್ ನಾಮಪತ್ರ ಸಲ್ಲಿಸಿದ್ದರು. ಬುಧವಾರ ಲೋಕಸಭೆ ಆರಂಭವಾದ ನಂತರ ಹಂಗಾಮಿ ಸ್ಪೀಕರ್ ಉಳಿದ ಏಳು ಸಂಸದರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಸ್ಪೀಕರ್ ಆಯ್ಕೆ ಪ್ರಕ್ರಿಯೆ ಆರಂಭವಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಓಂ ಬಿರ್ಲಾ ಅವರನ್ನು ಎನ್‌ಡಿಎ ಸ್ಪೀಕರ್ ಅಭ್ಯರ್ಥಿಯಾಗಿ ಸೂಚಿಸಿದರೆ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ಹಲವು ಸಚಿವರು ಮತ್ತು ಬಿಜೆಪಿ ಸಂಸದರು ಅವರನ್ನು ಬೆಂಬಲಿಸಿದರು.

ನಂತರ, ಕಾಂಗ್ರೆಸ್ ಸಂಸದ ಕೆ ಸುರೇಶ್ ಅವರ ಹೆಸರನ್ನು ಶಿವಸೇನಾ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಅವರು ಇಂಡಿಯಾ ಒಕ್ಕೂಟದ ಪರವಾಗಿ ಪ್ರಸ್ತಾಪಿಸಿದರು. ಇದನ್ನು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ, ಡಿಎಂಕೆ ಸಂಸದೆ ಕನಿಮೋಳಿ, ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಸೇರಿದಂತೆ ಹಲವು ವಿರೋಧ ಪಕ್ಷದ ಸಂಸದರು ಬೆಂಬಲಿಸಿದರು. ನಂತರ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆದಾಗ ಓಂ ಬಿರ್ಲಾ ಸರ್ವಾನುಮತದಿಂದ ಗೆದ್ದಿದ್ದಾರೆ ಎಂದು ಘೋಷಿಸಲಾಯಿತು.

ಸ್ಪೀಕರ್ ಆಗಿ ಆಯ್ಕೆಯಾದ ಓಂ ಬಿರ್ಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಭಿನಂದಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಸದನವನ್ನು ಯಶಸ್ವಿಯಾಗಿ ನಡೆಸಿದ ಅನುಭವ ನಿಮಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಲರಾಂ ಜಾಖರ್ ನಂತರ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆದಿರಲಿಲ್ಲ, ಸ್ಪರ್ಧೆ ಮಾಡಿ ಗೆದ್ದಿದ್ದೀರಿ ಎಂದು ಹೊಗಳಿದರು. ಮುಂದಿನ ಐದು ವರ್ಷಗಳ ಕಾಲ ಸದಸ್ಯರಿಗೆ ಮಾರ್ಗದರ್ಶನ ಮಾಡುವ ವಿಶ್ವಾಸವಿದೆ ಎಂದು ಮೋದಿ ಹೇಳಿದರು. ಸದನ ನಡೆಸುವಲ್ಲಿ ಸ್ಪೀಕರ್ ಬಹುಮುಖ್ಯ ಪಾತ್ರ ವಹಿಸುತ್ತಾರೆ ಎಂದು ಪ್ರತಿಕ್ರಿಯಿಸಿದರು.

ಇದೇ ವೇಳೆ ಇಂಡಿಯಾ ಒಕ್ಕೂಟದ ಪರವಾಗಿ ಶುಭ ಹಾರೈಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಈ ಸದನವು ಭಾರತದ ಜನತೆಯ ಧ್ವನಿಯನ್ನು ಆಲಿಸಬೇಕು ಮತ್ತು ಸದನವನ್ನು ಸುಗಮವಾಗಿ ನಡೆಸಲು ಪ್ರತಿಪಕ್ಷಗಳು ನಿಮಗೆ ಸಹಕಾರ ನೀಡುತ್ತವೆ ಎಂದು ಹೇಳಿದ್ದಾರೆ. ಈ ಹಿಂದೆ ನೀಲಂ ಸಂಜೀವ ರೆಡ್ಡಿ, ಎಂಎ ಅಯ್ಯಂಗಾರ್, ಜಿಎಸ್ ಧಿಲ್ಲೋನ್ ಮತ್ತು ಜಿಎಂಸಿ ಬಾಲಯೋಗಿ ಅವರು ಎರಡು ಬಾರಿ ಲೋಕಸಭೆಯ ಸ್ಪೀಕರ್ ಆಗಿದ್ದರೂ ಐದು ವರ್ಷಗಳ ಪೂರ್ಣ ಅವಧಿಗೆ ಅಧಿಕಾರದಲ್ಲಿರಲಿಲ್ಲ.

The post ಬಲರಾಮ್ ಜಾಖಡ್ ನಂತರ ಎರಡನೇ ಬಾರಿಗೆ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ first appeared on Kannada News | suddione.



source https://suddione.com/after-balaram-jakhad-om-birla-was-elected-speaker-of-the-lok-sabha-for-the-second-time/

Post a Comment

0 Comments