
ದೆಹಲಿ.ಜುಲೈ.05: ಇನ್‌ಸ್ಟಾಗ್ರಾಂ ಪ್ಲಾಟ್ ಫಾರ್ಮ್ ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಗೆ ಸಂಬಂಧಿಸಿದ ಜಾಹೀರಾತುಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಮೆಟಾ (Meta) ಸಂಸ್ಥೆಗೆ ತೀವ್ರ ಎಚ್ಚರಿಕೆಯ ನೋಟಿಸ್ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಈ ಕುರಿತು ಕಠಿಣ ಕ್ರಮ ಕೈಗೊಂಡಿದ್ದು, ಮಕ್ಕಳ ಶೋಷಣೆಯನ್ನು ಪ್ರೋತ್ಸಾಹಿಸುವ ಅಥವಾ ಅಂತಹ ವಿಷಯಗಳಿಗೆ ಪ್ರವೇಶ ಕಲ್ಪಿಸುವ ಎಲ್ಲಾ ರೀತಿಯ ಪಾವತಿ ಜಾಹೀರಾತುಗಳು (Paid Ads) ಮತ್ತು ಕಂಟೆಂಟ್ ಗಳನ್ನು ತಕ್ಷಣವೇ ನಿಷ್ಕ್ರಿಯಗೊಳಿಸುವಂತೆ ಇನ್‌ಸ್ಟಾಗ್ರಾಂಗೆ ನಿರ್ದೇಶನ ನೀಡಿದೆ.
ಮೂಲಗಳ ಪ್ರಕಾರ, ಇನ್‌ಸ್ಟಾಗ್ರಾಂನಲ್ಲಿ ಇಂತಹ ಆಕ್ಷೇಪಾರ್ಹ ವಿಷಯಗಳು ಹೇಗೆ ಕಾಣಿಸಿಕೊಂಡವು ಮತ್ತು ಈ ಸಮಸ್ಯೆಯನ್ನು ತಡೆಗಟ್ಟಲು ಕಂಪನಿಯು ಕೈಗೊಂಡಿರುವ ಕ್ರಮಗಳೇನು ಎಂಬ ಬಗ್ಗೆ ಸವಿಸ್ತಾರವಾದ ವಿವರಣೆಯನ್ನು ನೀಡುವಂತೆ ಮೆಟಾ ಸಂಸ್ಥೆಗೆ ಸರ್ಕಾರ ಸೂಚಿಸಿದೆ. ಈ ಕುರಿತು 7 ದಿನಗಳ ಒಳಗಾಗಿ ಲಿಖಿತ ಉತ್ತರ ನೀಡಬೇಕು ಎಂದು ಗಡುವು ವಿಧಿಸಲಾಗಿದೆ.
ಅಂತರ್ಜಾಲದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ಕಂಟೆಂಟ್‌ಗಳ ಪ್ರಸಾರ ಹಾಗೂ ಪ್ರಚಾರವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿಯೇ ಈ ನೋಟಿಸ್ ನೀಡಲಾಗಿದ್ದು, ಕಾನೂನುಬಾಹಿರ ಮತ್ತು ಶೋಷಣಾತ್ಮಕ ಕಂಟೆಂಟ್‌ಗಳನ್ನು ತಡೆಯಲು ಡಿಜಿಟಲ್ ಪ್ಲಾಟ್ ಫಾರ್ಮ್ ಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.












source https://suddione.com/breaking-news-central-government-orders-meta-to-remove-child-abuse-ads-on-instagram/

0 Comments
If u have any queries, Please let us know