ಕಾಮನ್‌ವೆಲ್ತ್ ಗೇಮ್ಸ್: ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಶರ್ಮಿಳಾ!

ಗ್ಲಾಸ್ಗೋ: ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ನ ಮಹಿಳೆಯರ ಶಾಟ್‌ಪಟ್ ಎಫ್57 (F57) ಫೈನಲ್‌ನಲ್ಲಿ ಭಾರತದ ಶರ್ಮಿಳಾ ಧನ್ಕರ್ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಶರ್ಮಿಳಾ ಭಾಜನರಾಗಿದ್ದು, ಭಾರತಕ್ಕೆ ಎರಡನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಐದನೇ ದಿನದ ಅಂತ್ಯಕ್ಕೆ ಭಾರತದ ಒಟ್ಟು ಪದಕಗಳ ಸಂಖ್ಯೆ 10ಕ್ಕೆ ಏರಿದೆ. ಶರ್ಮಿಳಾ ಸ್ಪರ್ಧಿಸಿದ್ದ ಇದೇ ವಿಭಾಗದಲ್ಲಿ ಪೈಪೋಟಿ ನಡೆಸಿದ್ದ ಭಾರತದ ಮತ್ತೊಬ್ಬ ಅಥ್ಲೀಟ್ ಶಿಲ್ಪಾ ಕೆ. ಶೈಲಾ ಅವರು ನಾಲ್ಕನೇ ಸ್ಥಾನದಿಂದ ಅದ್ಭುತವಾಗಿ ಚೇತರಿಸಿಕೊಂಡು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಹೈಜಂಪ್ ಹಾಗೂ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ

ರಾಷ್ಟ್ರೀಯ ದಾಖಲೆ ಹೊಂದಿರುವ ಸರ್ವೇಶ್ ಅನಿಲ್ ಕುಶಾರೆ ಪುರುಷರ ಹೈಜಂಪ್ ಫೈನಲ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ ಹೈಜಂಪ್‌ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ.

ವೇಟ್‌ಲಿಫ್ಟಿಂಗ್: ಪುರುಷರ 79 ಕೆಜಿ ವೇಟ್‌ಲಿಫ್ಟಿಂಗ್ ಫೈನಲ್‌ನಲ್ಲಿ ವಲ್ಲೂರಿ ಅಜಯ್ ಬಾಬು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಇದಕ್ಕೂ ಮುನ್ನ, ಮಹಿಳೆಯರ 53 ಕೆಜಿ ವೇಟ್‌ಲಿಫ್ಟಿಂಗ್ ಫೈನಲ್‌ನಲ್ಲಿ ಜ್ಞಾನೇಶ್ವರಿ ಯಾದವ್ ಬೆಳ್ಳಿ ಪದಕ ಹಾಗೂ 58 ಕೆಜಿ ವಿಭಾಗದ ಫೈನಲ್‌ನಲ್ಲಿ ಬಿಂದ್ಯಾರಾಣಿ ದೇವಿ ಕಂಚಿನ ಪದಕ ಜಯಿಸಿದ್ದರು.

ಪದಕಗಳ ಪಟ್ಟಿ

ಭಾರತ ಇದುವರೆಗೆ ಒಟ್ಟು 2 ಚಿನ್ನ, 5 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಇನ್ನೊಂದೆಡೆ, ಬಾಕ್ಸಿಂಗ್‌ನಲ್ಲಿ ಭಾರತದ ಸಚಿನ್ ಸಿವಾಚ್ (60 ಕೆಜಿ), ಅಂಕುಶ್ ಪಂಗಾಲ್ (80 ಕೆಜಿ) ಮತ್ತು ಸಾಕ್ಷಿ ಚೌಧರಿ (ಮಹಿಳೆಯರ 51 ಕೆಜಿ) ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಪದಕದ ನಿರೀಕ್ಷೆ ಹೆಚ್ಚಿಸಿದ್ದಾರೆ.



source https://suddione.com/commonwealth-games-sharmila-makes-history-by-winning-gold-in-para-athletics/

Post a Comment

0 Comments