
ದೆಹಲಿ.ಜುಲೈ.14: ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ, ದೇಶಾದ್ಯಂತ ಇರುವ ಎಲ್ಲಾ ಶಾಲೆ ಮತ್ತು ಕಾಲೇಜುಗಳಲ್ಲಿ ‘ಸಮಗ್ರ ಲೈಂಗಿಕ ಶಿಕ್ಷಣ’ (Comprehensive Body Education) ಜಾರಿಗೆ ತರಲು ತೀರ್ಮಾನಿಸಿರುವುದಾಗಿ ಸುಪ್ರೀಂ ಕೋರ್ಟ್ಗೆ ಅಧಿಕೃತವಾಗಿ ತಿಳಿಸಿದೆ.
ಈ ಕುರಿತು ರಚಿಸಲಾಗಿದ್ದ ರಾಷ್ಟ್ರೀಯ ತಜ್ಞರ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿದ್ದು, ಸರ್ವೋಚ್ಚ ನ್ಯಾಯಾಲಯದ ಅನುಮತಿ ಸಿಕ್ಕ ತಕ್ಷಣವೇ ಈ ಹೊಸ ನೀತಿಯನ್ನು ಅನುಷ್ಠಾನಕ್ಕೆ ತರುವುದಾಗಿ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹದೇವನ್ ಅವರನ್ನೊಳಗೊಂಡ ಧರ್ಮಾಸನದ ಮುಂದೆ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ಈ ಪ್ರಮುಖ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಯುವಜನತೆಯ ನಡುವೆ ಪರಸ್ಪರ ಒಪ್ಪಿಗೆಯಿಂದ ಏರ್ಪಡುವ ಸಂಬಂಧಗಳು ಮತ್ತು ಅಪ್ರಾಪ್ತ ವಯಸ್ಸಿನ ಗರ್ಭಧಾರಣೆಯಂತಹ ಸೂಕ್ಷ್ಮ ವಿಷಯಗಳು ಪೋಕ್ಸೋ (POCSO) ಕಾಯ್ದೆಯಡಿ ಕ್ರಿಮಿನಲ್ ಪ್ರಕರಣಗಳಾಗಿ ಬದಲಾಗಿ, ಅವರ ಜೀವನ ಹಾಳಾಗದಂತೆ ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶಿಸಿತ್ತು. ನ್ಯಾಯಾಲಯದ ಈ ಆದೇಶದ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದಲ್ಲಿ 26 ಸದಸ್ಯರ ರಾಷ್ಟ್ರೀಯ ತಜ್ಞರ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿತ್ತು. ಈ ಸಮಿತಿಯಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್, ಕ್ಲಿನಿಕಲ್ ಸೈಕಾಲಜಿಸ್ಟ್ಗಳು, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR), ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NLSA) ಪ್ರತಿನಿಧಿಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು ಭಾಗಿಯಾಗಿದ್ದರು.
ರಾಷ್ಟ್ರೀಯ ತಜ್ಞರ ಸಮಿತಿಯು ಪ್ರಾಥಮಿಕ ಶಾಲಾ ಹಂತದಿಂದಲೇ ವಿದ್ಯಾರ್ಥಿಗಳಿಗೆ ಅವರ ವಯಸ್ಸಿಗೆ ತಕ್ಕಂತೆ ಅಗತ್ಯ ವಿಷಯಗಳನ್ನು ಬೋಧಿಸಬೇಕು ಎಂದು ಶಿಫಾರಸು ಮಾಡಿದೆ. ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ (ಗುಡ್ ಟಚ್ ಮತ್ತು ಬ್ಯಾಡ್ ಟಚ್) ಜಾಗೃತಿ ಮೂಡಿಸುವುದು, ದೌರ್ಜನ್ಯಗಳು ನಡೆದಾಗ ಮಕ್ಕಳು ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಯಾರಿಗೆ ತಿಳಿಸಬೇಕು ಎಂಬುದನ್ನು ಕಲಿಸುವುದು, ಪ್ರಾಯಕ್ಕೆ ಬರುವಾಗ ದೇಹದಲ್ಲಿ ಆಗುವ ಬದಲಾವಣೆಗಳು ಹಾಗೂ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಪ್ರಾಥಮಿಕ ಅರಿವು ಮೂಡಿಸುವುದು ಮತ್ತು ವೈಜ್ಞಾನಿಕ ದೃಷ್ಟಿಕೋನದಲ್ಲಿ ದೇಹದ ಭಾಗಗಳ ಬಗ್ಗೆ ಪ್ರಾಥಮಿಕ ಜ್ಞಾನವನ್ನು ಒದಗಿಸುವುದು ಸಮಿತಿಯ ಪ್ರಮುಖ ಉದ್ದೇಶವಾಗಿದೆ.
ಹೊಸ ಶಿಕ್ಷಣ ನೀತಿಯ (NEP-2020) ಗುರಿಗಳಿಗೆ ಅನುಗುಣವಾಗಿ ಶಾಲೆ ಮತ್ತು ಕಾಲೇಜುಗಳಲ್ಲಿ ಕೌಮಾರ್ಯಾವಸ್ಥೆಯ ಶಿಕ್ಷಣವನ್ನು ಪರಿಚಯಿಸಲು NCERT ಸಂಸ್ಥೆಗೆ ವಿಶೇಷ ಪಠ್ಯ ಯೋಜನೆಯನ್ನು ರೂಪಿಸಲು ಸೂಚಿಸಲಾಗಿದೆ. ಇದರ ಅಡಿಯಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಲಾಗುವುದು ಹಾಗೂ ವಾರಕ್ಕೆ ಕನಿಷ್ಠ ಎರಡು ಬಾರಿ, 15 ರಿಂದ 20 ನಿಮಿಷಗಳ ಕಾಲ ಈ ಸಮಗ್ರ ಲೈಂಗಿಕ ಶಿಕ್ಷಣ ತರಗತಿಗಳನ್ನು ಕಡ್ಡಾಯವಾಗಿ ನಡೆಸಬೇಕಾಗುತ್ತದೆ. ಇದರೊಂದಿಗೆ ಮಕ್ಕಳ ಬೆಳವಣಿಗೆಯ ಹಂತಗಳು ಮತ್ತು ಲೈಂಗಿಕ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಪೋಷಕರಿಗೆ ವಿಶೇಷ ಮಾರ್ಗದರ್ಶನ ಶಿಬಿರಗಳನ್ನು ಆಯೋಜಿಸಲಾಗುವುದು.
ಈ ವರದಿಯನ್ನು ಹಿರಿಯ ವಕೀಲರಾದ ಮಾಧವಿ ದಿವಾನ್ ಮತ್ತು ಲಿಜ್ ಮ್ಯಾಥ್ಯೂ ಅವರು ಸ್ವಾಗತಿಸಿದ್ದಾರೆಯಾದರೂ, ‘ಸಮಗ್ರ ಲೈಂಗಿಕ ಶಿಕ್ಷಣ’ ಎಂಬ ಪದವನ್ನು ಮತ್ತಷ್ಟು ಸ್ಪಷ್ಟವಾಗಿ ಮತ್ತು ಸರಳವಾಗಿ ವ್ಯಾಖ್ಯಾನಿಸಬೇಕಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ ನಂತರ ಮುಂದಿನ ಮಾರ್ಗಸೂಚಿಗಳೊಂದಿಗೆ ಆದೇಶ ಹೊರಡಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.

source https://suddione.com/decision-to-implement-sex-education-in-schools-and-colleges-important-information-from-the-central-government-to-the-supreme-court/

0 Comments
If u have any queries, Please let us know