
ದೆಹಲಿ.ಜುಲೈ.29: ಜೀವವೈವಿಧ್ಯದ ಗಣಿಯಾಗಿರುವ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಕೇಂದ್ರ ಪರಿಸರ ಸಚಿವಾಲಯವು ಮಹತ್ವದ ನಿರ್ಧಾರ ಕೈಗೊಂಡಿದ್ದು, ಒಟ್ಟು 56,825.7 ಚದರ ಕಿಲೋಮೀಟರ್ ವ್ಯಾಪ್ತಿಯನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ (ಇಎಸ್‌ಎ) ಎಂದು ಘೋಷಿಸಲು 7ನೇ ಬಾರಿ ಕರಡು ಅಧಿಸೂಚನೆ ಹೊರಡಿಸಿದೆ.
2024ರ ಜುಲೈ 31ರಂದು ನೀಡಲಾಗಿದ್ದ ಹಿಂದಿನ ಕರಡು ಅಧಿಸೂಚನೆಯ 725 ದಿನಗಳ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಸಚಿವಾಲಯವು ಈ ಹೊಸ ಕರಡನ್ನು ಪ್ರಕಟಿಸಿದೆ. ಈ ಪ್ರಸ್ತಾವಿತ ಪರಿಸರ ಸೂಕ್ಷ್ಮ ವಲಯದಲ್ಲಿ ಕರ್ನಾಟಕದ ಅತಿ ಹೆಚ್ಚು ಅಂದರೆ 20,668 ಚದರ ಕಿಲೋಮೀಟರ್ ಪ್ರದೇಶ ಸೇರಿದೆ. ಉಳಿದಂತೆ ಮಹಾರಾಷ್ಟ್ರದ 17,340 ಚ.ಕಿ.ಮೀ., ಕೇರಳದ 9,993.7 ಚ.ಕಿ.ಮೀ., ತಮಿಳುನಾಡಿನ 6,914 ಚ.ಕಿ.ಮೀ., ಗೋವಾದ 1,461 ಚ.ಕಿ.ಮೀ. ಹಾಗೂ ಗುಜರಾತ್‌ನ 449 ಚದರ ಕಿಲೋಮೀಟರ್ ಪ್ರದೇಶಗಳು ಈ ವ್ಯಾಪ್ತಿಗೆ ಬರಲಿವೆ.
ಅಪರೂಪದ ಸಸ್ಯ ಹಾಗೂ ಪ್ರಾಣಿ ಸಂಕುಲವನ್ನು ಹೊಂದಿರುವ ಈ ಭಾಗದ ಪ್ರಾಕೃತಿಕ ಸಮತೋಲನವನ್ನು ಕಾಯ್ದುಕೊಳ್ಳುವ ಸಲುವಾಗಿ, ನಿರ್ದಿಷ್ಟ ವಲಯಗಳಲ್ಲಿ ಗಣಿಗಾರಿಕೆ, ಬೃಹತ್ ಕಟ್ಟಡ ನಿರ್ಮಾಣ ಮತ್ತು ಶಾಖೋತ್ಪನ್ನ ವಿದ್ಯುತ್ ಘಟಕಗಳ ಸ್ಥಾಪನೆಯಂತಹ ವಿನಾಶಕಾರಿ ಚಟುವಟಿಕೆಗಳಿಗೆ ಸಂಪೂರ್ಣ ನಿಷೇಧ ಹೇರಲಾಗುತ್ತದೆ.
ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಮಾಧವ್ ಗಾಡ್ಗೀಳ್ ಸಮಿತಿಯು 2011ರಲ್ಲಿ ನೀಡಿದ್ದ ಶಿಫಾರಸಿನ ಆಧಾರದ ಮೇಲೆ, 2013ರಲ್ಲಿ ಕಸ್ತೂರಿರಂಗನ್ ಸಮಿತಿಯು ಪರಿಶೀಲಿತ ವರದಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ 2014ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಅಲ್ಲಿಂದೀಚೆಗೆ ರಾಜ್ಯಗಳ ವಿರೋಧ ಹಾಗೂ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಅಂತಿಮ ಆದೇಶ ಹೊರಬಿದ್ದಿರಲಿಲ್ಲ. ಇದೀಗ ಏಳನೇ ಬಾರಿಗೆ ಕರಡು ಪ್ರಕಟಿಸುವ ಮೂಲಕ ಕೇಂದ್ರ ಸರ್ಕಾರವು ಘಟ್ಟಗಳ ರಕ್ಷಣೆಗೆ ಮರುಜೀವ ನೀಡಿದೆ.





source https://suddione.com/important-step-to-protect-western-ghats-draft-notification-from-the-centre-to-declare-56000-sq-km-as-an-eco-sensitive-area/

0 Comments
If u have any queries, Please let us know