ಮಳೆ ಅಭಾವದಿಂದ ದೇಶದ 54 ಪ್ರಮುಖ ಜಲಾಶಯಗಳಲ್ಲಿ ಶೇ. 80 ಕ್ಕಿಂತಲೂ ಕಡಿಮೆ ನೀರು ಸಂಗ್ರಹ!

ದೆಹಲಿ.ಜುಲೈ.27: ದೇಶಾದ್ಯಂತ ಮುಂಗಾರು ಮಳೆಯ ಅಭಾವ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಕಳವಳಕಾರಿ ಮಟ್ಟಕ್ಕೆ ಕುಸಿದಿದೆ.

ಕೇಂದ್ರ ಜಲ ಆಯೋಗವು (CWC) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ದೇಶದ ಒಟ್ಟು 166 ಪ್ರಮುಖ ಜಲಾಶಯಗಳ ಪೈಕಿ 54 ಜಲಾಶಯಗಳಲ್ಲಿ ನೀರಿನ ಮಟ್ಟವು ಸಾಮಾನ್ಯ ಸ್ಥಿತಿಗಿಂತ ಶೇಕಡಾ 80 ಕ್ಕಿಂತಲೂ ಕಡಿಮೆಯಾಗಿದೆ. ಜೂನ್ 1 ರಿಂದ ಜುಲೈ 25 ರವರೆಗಿನ ಅವಧಿಯಲ್ಲಿ ದೇಶಾದ್ಯಂತ ಒಟ್ಟಾರೆಯಾಗಿ ಶೇಕಡಾ 15 ರಷ್ಟು ಮಳೆಯ ಕೊರತೆಯಾಗಿರುವುದೇ ಈ ಕಠಿಣ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ.

ಪ್ರಸ್ತುತ ದೇಶದ 166 ಪ್ರಮುಖ ಜಲಾಶಯಗಳಲ್ಲಿ ಕೇವಲ 70.43 ಬಿ.ಸಿ.ಎಂ (BCM) ನೀರಿದ್ದು, ಇದು ಒಟ್ಟು ಸಂಗ್ರಹ ಸಾಮರ್ಥ್ಯದ ಶೇಕಡಾ 38.37 ರಷ್ಟು ಮಾತ್ರವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 110.52 ಬಿ.ಸಿ.ಎಂ ನೀರಿನ ಸಂಗ್ರಹವಿತ್ತು. ಅಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಪ್ರಮಾಣ ಶೇಕಡಾ 36 ರಷ್ಟು ಭಾರಿ ಇಳಿಕೆಯಾಗಿದೆ. ಇನ್ನು ಪರಿಸ್ಥಿತಿ ತೀವ್ರವಾಗಿರುವ 54 ಜಲಾಶಯಗಳ ಪೈಕಿ 22 ಜಲಾಶಯಗಳಲ್ಲಿ ನೀರು ಸಾಮಾನ್ಯ ಮಟ್ಟದ ಅರ್ಧಕ್ಕಿಂತಲೂ, ಅಂದರೆ ಶೇಕಡಾ 50 ಕ್ಕಿಂತಲೂ ಕೆಳಗೆ ಕುಸಿದಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಗಡಾಯಿಸಿದ ಜಲಸಂಕಟ
ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಜಲಾಶಯಗಳ ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ. ಇಲ್ಲಿನ 47 ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ ಕೇವಲ ಶೇಕಡಾ 30 ರಷ್ಟು ಮಾತ್ರ ನೀರು ಬಾಕಿ ಉಳಿದಿದೆ. ಕಳೆದ ವರ್ಷ ಇದೇ ವೇಳೆಗೆ ಶೇಕಡಾ 69 ರಷ್ಟು ನೀರಿತ್ತು. ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ತೆಲಂಗಾಣ ಒಂದರಲ್ಲೇ ಸಾಮಾನ್ಯಕ್ಕಿಂತ ಶೇಕಡಾ 57 ರಷ್ಟು ನೀರಿನ ಕೊರತೆ ಕಂಡುಬಂದಿದೆ. ಪ್ರಮುಖವಾಗಿ ಶ್ರೀಶೈಲಂ, ನಾಗಾರ್ಜುನ ಸಾಗರ, ತುಂಗಭದ್ರಾ, ಕೃಷ್ಣರಾಜ ಸಾಗರ (KRS), ಪೆರಿಯಾರ್ ಹಾಗೂ ತವಾ ಜಲಾಶಯಗಳಲ್ಲಿ ನೀರಿಲ್ಲದೆ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದೆ.



source https://suddione.com/due-to-lack-of-rain-less-than-80-of-the-water-is-stored-in-54-major-reservoirs-of-the-country/

Post a Comment

0 Comments