
ದೆಹಲಿ.ಜುಲೈ.10: ಪ್ರಸಿದ್ಧ ಬಾಲಿವುಡ್ ನಟ ರಾಜ್ ಪಾಲ್ ಯಾದವ್ ಅವರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಅವರ ವಿರುದ್ಧ ದಾಖಲಾಗಿದ್ದ ಒಟ್ಟು ಏಳು ಚೆಕ್ ಬೌನ್ಸ್ ಪ್ರಕರಣಗಳಲ್ಲಿ ತಲಾ ಮೂರು ತಿಂಗಳ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ. ಈ ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಚಲಾವಣೆಯಲ್ಲಿರಲಿವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆದಾಗ್ಯೂ, ಈ ತೀರ್ಪಿನ ವಿರುದ್ಧ ಮೇಲ್ಮನವಿ ನ್ಯಾಯಾಲಯವನ್ನು ಸಂಪರ್ಕಿಸಲು ರಾಜ್ ಪಾಲ್ ಯಾದವ್ ಅವರಿಗೆ ಹೈಕೋರ್ಟ್ ಎರಡು ತಿಂಗಳ ಕಾಲಾವಕಾಶ ನೀಡಿದೆ.
ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ರಾಜ್ ಪಾಲ್ ಯಾದವ್ ಅವರ ಅಪರಾಧವನ್ನು ಎತ್ತಿಹಿಡಿದಿದ್ದು, ಪ್ರತಿ ಪ್ರಕರಣದಲ್ಲೂ ದೂರುದಾರರಿಗೆ ತಲಾ 1.05 ಕೋಟಿ ರೂಪಾಯಿ ಪಾವತಿಸುವಂತೆ ಆದೇಶಿಸಿದ್ದಾರೆ. ಇದರೊಂದಿಗೆ ಹೆಚ್ಚುವರಿಯಾಗಿ 1.04 ಕೋಟಿ ರೂಪಾಯಿಗಳನ್ನು ದೂರುದಾರರಿಗೆ ಹಾಗೂ 25,000 ರೂಪಾಯಿಗಳನ್ನು ರಾಜ್ಯ ಸರ್ಕಾರಕ್ಕೆ ಪಾವತಿಸಲು ಸೂಚಿಸಲಾಗಿದೆ.
ಇದಲ್ಲದೆ, ನಟನ ಪತ್ನಿ ರಾಧಾ ಯಾದವ್ ಅವರಿಗೂ ಕೋರ್ಟ್ ಭಾರಿ ದಂಡ ವಿಧಿಸಿದ್ದು, ಪ್ರತಿ ಪ್ರಕರಣದಲ್ಲೂ ದೂರುದಾರರಿಗೆ ತಲಾ 5.51 ಕೋಟಿ ರೂಪಾಯಿ ಪಾವತಿಸುವಂತೆ ಆದೇಶಿಸಿದೆ. ಆದರೆ, ನಟ ಈಗಾಗಲೇ ಪಾವತಿಸಿರುವ 2.25 ಕೋಟಿ ರೂಪಾಯಿಗಳನ್ನು ಅಂತಿಮ ಮೊತ್ತದಲ್ಲಿ ಹೊಂದಾಣಿಕೆ ಮಾಡಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ರಾಜ್ಪಾಲ್ ಯಾದವ್ ಅವರ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಅವರಿಗೆ ಪ್ರೊಬೇಷನ್ ನೀಡಲು ನಿರಾಕರಿಸಿದೆ. ವಿಚಾರಣೆಯ ಅವಧಿಯಲ್ಲಿ ಅವರು ನೀಡಿದ ಹೇಳಿಕೆಗಳಲ್ಲಿನ ಅಸಂಗತತೆಯನ್ನು ಪ್ರಶ್ನಿಸಿದ ನ್ಯಾಯಮೂರ್ತಿ ಶರ್ಮಾ ಅವರು, ನನಗೆ ಸೂಕ್ತ ಉತ್ತರಗಳು ಸಿಗುತ್ತಿಲ್ಲ. ನೀವು ನೀಡಿದ ಮುಚ್ಚಳಿಕೆ ಪತ್ರದಲ್ಲಿ ಒಂದು ಹೇಳಿಕೆ ಇತ್ತು, ಈಗ ಬೇರೆಯದೇ ಹೇಳುತ್ತಿದ್ದೀರಿ. ನ್ಯಾಯಾಧೀಶರು ನಿಮ್ಮೊಂದಿಗೆ ಮೃದುವಾಗಿ ನಡೆದುಕೊಂಡರೆ ಅವರನ್ನು ದುರ್ಬಲರೆಂದು ಎಂದಿಗೂ ಭಾವಿಸಬೇಡಿ ಎಂದು ತರಾಟೆಗೆ ತೆಗೆದುಕೊಂಡರು.
ಟ್ರಯಲ್ ಕೋರ್ಟ್ ವಿಧಿಸಿರುವ ದಂಡವನ್ನು ಪಾವತಿಸುವಂತೆ ಸೂಚಿಸಿರುವ ಹೈಕೋರ್ಟ್, ಒಂದು ವೇಳೆ ದಂಡ ಪಾವತಿಸಲು ವಿಫಲರಾದರೆ ಹೆಚ್ಚುವರಿ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ದೂರುದಾರ ಸಂಸ್ಥೆಯಾದ ‘ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್’ ಪರವಾಗಿ ಹಾಜರಾಗಿದ್ದ ವಕೀಲ ಅವ್ನಿಶ್ ಸಿಕ್ಕಾ ಮಾತನಾಡಿ, ರಾಜ್ಪಾಲ್ ಯಾದವ್ ಸಲ್ಲಿಸಿದ್ದ ಎಲ್ಲಾ ಪರಿಷ್ಕರಣಾ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ ಮತ್ತು ಟ್ರಯಲ್ ಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ. ಕೋರ್ಟ್ಗೆ ನೀಡಿದ ಭರವಸೆಗಳನ್ನು ಪದೇ ಪದೇ ಉಲ್ಲಂಘಿಸಿದ ಕಾರಣ ಮತ್ತು ಅವರ ನಡವಳಿಕೆಯನ್ನು ಗಮನಿಸಿ ನ್ಯಾಯಾಲಯ ಅವರಿಗೆ ಪ್ರೊಬೇಷನ್ ನೀಡಲು ನಿರಾಕರಿಸಿದೆ ಎಂದು ತಿಳಿಸಿದ್ದಾರೆ.


source https://suddione.com/cheque-bounce-case-delhi-high-court-sentences-actor-rajpal-yadav-to-3-months-in-jail/


0 Comments
If u have any queries, Please let us know