ನೌಕರರ ಸೇವೆಯಿಂದ ವಜಾ ಶಿಕ್ಷೆಯು ಗಂಭೀರ ದುರ್ನಡತೆಗಷ್ಟೇ ಸೀಮಿತವಾಗಿರಲಿ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ದೆಹಲಿ: ನೌಕರನನ್ನು ಸೇವೆಯಿಂದ ವಜಾಗೊಳಿಸುವುದು ಅತ್ಯಂತ ಕಠಿಣ ಶಿಕ್ಷೆಯಾಗಿದ್ದು, ಇದು ಕೇವಲ ನೌಕರನ ಮೇಲಷ್ಟೇ ಅಲ್ಲದೆ ಆತನನ್ನು ನಂಬಿಕೊಂಡಿರುವ ಕುಟುಂಬದ ಮೇಲೆಯೂ ಅತ್ಯಂತ ವಿನಾಶಕಾರಿ ಪರಿಣಾಮ ಬೀರುತ್ತದೆ. ಹಾಗಾಗಿ, ಇಂತಹ ಕಠಿಣ ಶಿಕ್ಷೆ ವಿಧಿಸುವ ಮುನ್ನ ಶಿಸ್ತುಪಾಲನಾ ಅಧಿಕಾರಿಗಳು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ಅವಲೋಕನ ಮಾಡಿದೆ.

ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ (MSEDCL) ಮಾಜಿ ಉದ್ಯೋಗಿಯೊಬ್ಬರ ವಜಾ ಆದೇಶವನ್ನು ಎತ್ತಿಹಿಡಿದಿದ್ದ ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠದ ಏಪ್ರಿಲ್ 2024ರ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು ಈ ಆದೇಶ ನೀಡಿದೆ.

ಉದ್ಯೋಗಿಯ ವಿರುದ್ಧ ಸಾಬೀತಾಗಿರುವ ದುರ್ನಡತೆಗೆ ಹೋಲಿಸಿದರೆ 2017ರ ಜುಲೈನಲ್ಲಿ ನೀಡಲಾಗಿದ್ದ ವಜಾ ಆದೇಶವು ಅಸಮಾನ ಮತ್ತು ಅತ್ಯಂತ ಕಠಿಣ”ವಾಗಿದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಆ ಆದೇಶವನ್ನು ರದ್ದುಗೊಳಿಸಿದೆ. ಅಲ್ಲದೆ, ನೌಕರನ ದೀರ್ಘಾವಧಿಯ ಸೇವೆ ಮತ್ತು ಇತರ ಪೂರಕ ಅಂಶಗಳನ್ನು ಪರಿಗಣಿಸಿ, ವಜಾ ಶಿಕ್ಷೆಯನ್ನು ಹೊರತುಪಡಿಸಿ ಬೇರೆ ಯಾವುದೇ ಸೂಕ್ತ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ನಿರ್ದೇಶನ ನೀಡಿದೆ.

ನೌಕರನ ಮುಂದುವರಿಕೆಯು ಕಚೇರಿಯ ಶಿಸ್ತು, ನಂಬಿಕೆ ಅಥವಾ ಸಾಂಸ್ಥಿಕ ಕಾರ್ಯನಿರ್ವಹಣೆಗೆ ಸಂಪೂರ್ಣವಾಗಿ ಧಕ್ಕೆ ತರುತ್ತದೆ ಎನ್ನುವಂತಹ ಗಂಭೀರ ದುರ್ನಡತೆಯ ಸಂದರ್ಭಗಳಲ್ಲಿ ಮಾತ್ರ ಸೇವೆಯಿಂದ ವಜಾಗೊಳಿಸುವುದು ನ್ಯಾಯಸಮ್ಮತ ಎನಿಸಿಕೊಳ್ಳುತ್ತದೆ ಎಂದು ಪೀಠ ಹೇಳಿದೆ.
ಅದೇ ಸಮಯದಲ್ಲಿ, ಭ್ರಷ್ಟಾಚಾರ, ಕಾನೂನುಬಾಹಿರ ಆಮಿಷ, ನೈತಿಕ ಅಧಃಪತನ, ಹಣದ ದುರುಪಯೋಗ, ಉದ್ಯೋಗದಾತರಿಗೆ ಭಾರಿ ಆರ್ಥಿಕ ನಷ್ಟ ಉಂಟುಮಾಡುವುದು ಅಥವಾ ಸೇವೆಗೆ ಸಂಪೂರ್ಣವಾಗಿ ಅನರ್ಹರಾಗುವಂತಹ ಪ್ರಕರಣಗಳು ಬೇರೆಯದೇ ಆದ ಸ್ವರೂಪವನ್ನು ಹೊಂದಿರುತ್ತವೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಆದರೆ, ದುರ್ನಡತೆಯು ಭ್ರಷ್ಟಾಚಾರ ಅಥವಾ ಆರ್ಥಿಕ ನಷ್ಟಕ್ಕೆ ಸಂಬಂಧಿಸದೇ ಇದ್ದಾಗ ಮತ್ತು ನೌಕರನು ಯಾವುದೇ ಕಳಂಕವಿಲ್ಲದೆ ದೀರ್ಘಕಾಲ ಸೇವೆ ಸಲ್ಲಿಸಿರುವಾಗ, ಕಡಿಮೆ ಪ್ರಮಾಣದ ಶಿಕ್ಷೆಯಿಂದ ನ್ಯಾಯ ಒದಗಿಸಲು ಸಾಧ್ಯವೇ ಎಂಬುದನ್ನು ಶಿಸ್ತುಪಾಲನಾ ಪ್ರಾಧಿಕಾರವು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಕೋರ್ಟ್ ತಿಳಿಸಿದೆ.
ಪ್ರಸ್ತುತ ಪ್ರಕರಣದ ಅಪೀಲುದಾರರು ಏಪ್ರಿಲ್ 1985 ರಲ್ಲಿ ಸೇವೆಗೆ ಸೇರಿದ್ದರು. ಕಚೇರಿ ಶಿಸ್ತು ಉಲ್ಲಂಘನೆ, ಮೇಲಧಿಕಾರಿಗಳ ಆದೇಶ ಪಾಲಿಸದಿರುವುದು ಮತ್ತು ನಿರ್ಲಕ್ಷ್ಯದ ಆರೋಪದ ಮೇಲೆ ಸೆಪ್ಟೆಂಬರ್ 2006 ರಲ್ಲಿ ಅವರನ್ನು ಅಮಾನತುಗೊಳಿಸಲಾಗಿತ್ತು. ಇಲಾಖೆಯ ವಿಚಾರಣೆ ನೆಪದಲ್ಲಿ ಅವರ ಅಮಾನತು ಅವಧಿಯು ಬರೋಬ್ಬರಿ 11 ವರ್ಷಗಳ ಕಾಲ ಮುಂದುವರಿದಿತ್ತು. ಅಂತಿಮವಾಗಿ ಜುಲೈ 2017 ರಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ ಅಮಾನತು ಅವಧಿಯನ್ನೇ ಒಂದು ಶಿಕ್ಷೆಯಾಗಿ ಪರಿಗಣಿಸಿ, ಮತ್ತೊಂದು ಶಿಕ್ಷೆ ವಿಧಿಸುವುದು ಕಾನೂನುಬಾಹಿರ ಎಂದು ಕೋರ್ಟ್ ಹೇಳಿದೆ.

ಸೇವೆಯಿಂದ ವಜಾಗೊಳಿಸುವುದು ಉದ್ಯೋಗಿ ಮತ್ತು ಸಂಸ್ಥೆಯ ನಡುವಿನ ಸಂಬಂಧವನ್ನು ಶಾಶ್ವತವಾಗಿ ಕೊನೆಗೊಳಿಸುತ್ತದೆ. ಇದು ನಿವೃತ್ತಿ ಸೌಲಭ್ಯಗಳು ಸೇರಿದಂತೆ ಹಿಂದಿನ ಸೇವೆಯ ಎಲ್ಲಾ ಪ್ರಯೋಜನಗಳನ್ನು ಕಿತ್ತುಕೊಳ್ಳುತ್ತದೆ. ಇದು ಕೇವಲ ನೌಕರನಿಗೆ ಮಾತ್ರವಲ್ಲದೆ, ಆ ಆದಾಯವನ್ನು ನಂಬಿಕೊಂಡಿರುವ ಕುಟುಂಬದ ಸದಸ್ಯರಿಗೂ ತೀವ್ರ ಸಂಕಷ್ಟ ತಂದೊಡ್ಡುತ್ತದೆ” ಎಂದು ನ್ಯಾಯಾಧೀಶರು ಆತಂಕ ವ್ಯಕ್ತಪಡಿಸಿದ್ದಾರೆ.
ನಾಲ್ಕು ವಾರಗಳ ಒಳಗಾಗಿ ಅಪೀಲುದಾರರಿಗೆ ಶೋಕಾಸ್ (ಕಾರಣ ಕೇಳಿ) ನೋಟಿಸ್ ಜಾರಿ ಮಾಡಬೇಕು. ಮುಂದಿನ ಎಂಟು ವಾರಗಳ ಒಳಗೆ ವಜಾ ಶಿಕ್ಷೆಯ ಹೊರತಾಗಿ ಪರ್ಯಾಯ ಶಿಕ್ಷೆಯನ್ನು ವಿಧಿಸಿ ತರ್ಕಬದ್ಧ ಆದೇಶ ಹೊರಡಿಸಬೇಕು.ಅಪೀಲುದಾರರು ಈಗಾಗಲೇ ನಿವೃತ್ತಿ ವಯಸ್ಸನ್ನು (Superannuation) ದಾಟಿರುವುದರಿಂದ ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ.ಆದ್ದರಿಂದ, ಹೊಸ ಆದೇಶದ ಆಧಾರದ ಮೇಲೆ ಅವರ ಆರ್ಥಿಕ ಮತ್ತು ನಿವೃತ್ತಿ ಸೌಲಭ್ಯಗಳ ನಿರ್ಧಾರವಾಗಲಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.



source https://suddione.com/dismissal-from-service-of-employees-should-be-limited-to-serious-misconduct-supreme-courts-landmark-verdict/

Post a Comment

0 Comments