ನೀಟ್ ಯುಜಿ ಪರೀಕ್ಷೆಯ ಸಮಯ 195 ನಿಮಿಷಕ್ಕೆ ವಿಸ್ತರಣೆ : NTA ಘೋಷಣೆ

ದೆಹಲಿ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET UG 2026) ಬರೆಯಲಿರುವ ದೇಶದ ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಭರ್ಜರಿ ಸಿಹಿ ಸುದ್ದಿ ನೀಡಿದೆ. ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಲು ಮತ್ತು ಪರೀಕ್ಷಾ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭ ಹಾಗೂ ಸುರಕ್ಷಿತವಾಗಿಸಲು ಎನ್ಟಿಎ ಹಲವು ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ.

ಈ ವರ್ಷದ ಜೂನ್ 21, 2026 ರಂದು ನಡೆಯಲಿರುವ ನೀಟ್ ಯುಜಿ ಪರೀಕ್ಷೆಯಲ್ಲಿ ಈ ಕೆಳಗಿನ ಪ್ರಮುಖ ಮಾರ್ಪಾಡುಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಎನ್ಟಿಎ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹೆಚ್ಚಿನ ಸಮಯ ಸಿಗುವಂತಾಗಲು ಒಟ್ಟು ಪರೀಕ್ಷಾ ಅವಧಿಯನ್ನು 195 ನಿಮಿಷಗಳಿಗೆ (3 ಗಂಟೆ 15 ನಿಮಿಷ) ವಿಸ್ತರಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಪರೀಕ್ಷೆಯು ಮಧ್ಯಾಹ್ನ 2:00 ಗಂಟೆಯಿಂದ ಸಂಜೆ 5:15 ರವರೆಗೆ ನಡೆಯಲಿದೆ.ಹಾಜರಾತಿ ಪಟ್ಟಿಗೆ ಸಹಿ ಮಾಡುವುದು, ಕಣ್ಗಾವಲು ಪ್ರಕ್ರಿಯೆಗಳು ಸೇರಿದಂತೆ ಪರೀಕ್ಷಾ ಕೊಠಡಿಯ ಕಡ್ಡಾಯ ಆಡಳಿತಾತ್ಮಕ ಕೆಲಸಗಳಿಗಾಗಿ ವಿದ್ಯಾರ್ಥಿಗಳ ಸಮಯ ವ್ಯರ್ಥವಾಗುತ್ತಿತ್ತು. ಈ ಸಮಯವನ್ನು ಸರಿದೂಗಿಸಲು ಹೆಚ್ಚುವರಿ 15 ನಿಮಿಷಗಳನ್ನು ನೀಡಲಾಗಿದ್ದು, ಇದರಿಂದಾಗಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಸಂಪೂರ್ಣ ಸಮಯವನ್ನು ಪ್ರಶ್ನೆ ಪತ್ರಿಕೆ ಉತ್ತರಿಸಲು ಬಳಸಿಕೊಳ್ಳಬಹುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಭೌತಶಾಸ್ತ್ರ (Physics) ಮತ್ತು ರಸಾಯನಶಾಸ್ತ್ರ (Chemistry) ವಿಷಯಗಳ ಲೆಕ್ಕಾಚಾರಗಳನ್ನು ಮಾಡಲು ಪ್ರಶ್ನೆ ಪತ್ರಿಕೆಯ ಬುಕ್ಲೆಟ್ನಲ್ಲಿ ಕೇವಲ ಸೀಮಿತ ಜಾಗವಿರುತ್ತಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು. ವಿದ್ಯಾರ್ಥಿಗಳ ಈ ದೂರುಗಳನ್ನು ಪರಿಗಣಿಸಿರುವ ಎನ್ಟಿಎ, ಈ ಬಾರಿ ರಫ್ ವರ್ಕ್ ಮಾಡಲು ಪ್ರಶ್ನೆ ಪತ್ರಿಕೆಯಲ್ಲಿ ಹೆಚ್ಚಿನ ಸ್ಥಳಾವಕಾಶ (Space) ಕಲ್ಪಿಸಿಕೊಡಲು ನಿರ್ಧರಿಸಿದೆ.

ವರ್ಷಗಳಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಬಂದ ಪ್ರತಿಕ್ರಿಯೆಗಳನ್ನು ಆಧರಿಸಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಪರೀಕ್ಷೆಯ ಪಾರದರ್ಶಕತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುತ್ತಲೇ, ವಿದ್ಯಾರ್ಥಿಗಳಿಗೆ ಗೊಂದಲಮುಕ್ತ ಮತ್ತು ಆರಾಮದಾಯಕ ವಾತಾವರಣವನ್ನು ಒದಗಿಸುವುದು ನಮ್ಮ ಮುಖ್ಯ ಉದ್ದೇಶ” ಎಂದು ಎನ್ಟಿಎ ತಿಳಿಸಿದೆ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಎನ್ಟಿಎ ಬಿಡುಗಡೆ ಮಾಡಿರುವ ಪರಿಷ್ಕೃತ ಮಾರ್ಗಸೂಚಿಗಳು ಮತ್ತು ವೇಳಾಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಪ್ರವೇಶ ಪತ್ರ (Admit Card) ಮತ್ತು ಪರೀಕ್ಷಾ ದಿನದ ಇತರ ಪ್ರಮುಖ ನಿಯಮಗಳ ಕುರಿತು ಅಧಿಕೃತ ವೆಬ್ಸೈಟ್ ಮೂಲಕ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.



source https://suddione.com/neet-ug-exam-time-extended-to-195-minutes-nta-announcement/

Post a Comment

0 Comments