
ಸಾರ್ವಜನಿಕರ ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಕ್ರಮ ಕೈಗೊಂಡಿದೆ. ವೈಜ್ಞಾನಿಕ ಆಧಾರಗಳ ಕೊರತೆ ಹಾಗೂ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಲೋವೆರಾ (ಲೋಳೆಸರ) ಆಧಾರಿತ ಚರ್ಮದ ಕ್ರೀಮ್‌ಗಳು, ಕೆಲವು ಆಂಟಿಬಯೋಟಿಕ್‌ಗಳು ಸೇರಿದಂತೆ ಒಟ್ಟು 16 ಫಿಕ್ಸ್ಡ್ ಡೋಸ್ ಕಾಂಬಿನೇಷನ್ (FDC) ಔಷಧಿಗಳ ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ದೇಶಾದ್ಯಂತ ನಿಷೇಧಿಸಲಾಗಿದೆ.
ಎರಡು ಅಥವಾ ಅದಕ್ಕಿಂತ ಹೆಚ್ಚು ಸಕ್ರಿಯ ಔಷಧೀಯ ಘಟಕಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸೇರಿಸಿ ತಯಾರಿಸುವ ಔಷಧಿಗಳನ್ನು ಫಿಕ್ಸ್ಡ್ ಡೋಸ್ ಕಾಂಬಿನೇಷನ್ (FDC) ಎಂದು ಕರೆಯಲಾಗುತ್ತದೆ. ಈ ಔಷಧಿಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಡ್ರಗ್ಸ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ (DTAB) ಹಾಗೂ ತಜ್ಞರ ಸಮಿತಿ ಪರಿಶೀಲಿಸಿದ್ದು, ಹಲವು ಸಂಯೋಜನೆಗಳಿಗೆ ಯಾವುದೇ ವೈಜ್ಞಾನಿಕ ಅಥವಾ ಚಿಕಿತ್ಸಕ ಸಮರ್ಥನೆ ಇಲ್ಲ ಎಂದು ವರದಿ ನೀಡಿದೆ.ತಜ್ಞರ ಅಭಿಪ್ರಾಯದಂತೆ, ಈ ಸಂಯೋಜನೆಗಳ ಬಳಕೆಯಿಂದ ಮಾನವ ಆರೋಗ್ಯಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದ್ದು, ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ 1940ರ ಸೆಕ್ಷನ್ 26A ಅಡಿಯಲ್ಲಿ ಕೇಂದ್ರ ಸರ್ಕಾರ ನಿಷೇಧ ಆದೇಶ ಹೊರಡಿಸಿದೆ.

ನಿಷೇಧಿತ ಪಟ್ಟಿಯಲ್ಲಿ ಅಲೋವೆರಾ, ವಿಟಮಿನ್ ಇ, ಜೊಜೊಬಾ ಆಯಿಲ್, ಟೀ ಟ್ರೀ ಆಯಿಲ್, ಆಲಿವ್ ಆಯಿಲ್ ಸೇರಿದಂತೆ ವಿವಿಧ ತೈಲಗಳು ಮತ್ತು ಪೌಷ್ಟಿಕಾಂಶಗಳನ್ನು ಮಿಶ್ರಣ ಮಾಡಿ ತಯಾರಿಸಲಾದ 10ಕ್ಕೂ ಹೆಚ್ಚು ಚರ್ಮದ ಆರೈಕೆ ಕ್ರೀಮ್‌ಗಳು ಸೇರಿವೆ. ಇವುಗಳ ಸೂತ್ರೀಕರಣ ಸ್ಪಷ್ಟವಾಗಿಲ್ಲ ಹಾಗೂ ಆರೋಗ್ಯದ ಮೇಲೆ ಪರಿಣಾಮದ ಕುರಿತು ಸಾಕಷ್ಟು ವೈಜ್ಞಾನಿಕ ಸಾಕ್ಷ್ಯಗಳಿಲ್ಲ ಎಂಬುದು ತಜ್ಞರ ಕಳವಳಕ್ಕೆ ಕಾರಣವಾಗಿದೆ.ಇದರ ಜೊತೆಗೆ ಅಮೋಕ್ಸಿಸಿಲಿನ್ ಆಧಾರಿತ ಕೆಲವು ಆಂಟಿಬಯೋಟಿಕ್ ಸಂಯೋಜನೆಗಳು ಮತ್ತು ಇತರೆ ಔಷಧಿ ಮಿಶ್ರಣಗಳನ್ನೂ ನಿಷೇಧಿಸಲಾಗಿದೆ. ವೈದ್ಯರ ಸಲಹೆ ಇಲ್ಲದೆ ಬಳಸಲಾಗುತ್ತಿದ್ದ ಕೆಲವು ಉತ್ಪನ್ನಗಳು ಈಗ ಮಾರುಕಟ್ಟೆಯಿಂದ ಸಂಪೂರ್ಣವಾಗಿ ಹಿಂಪಡೆಯಬೇಕಾಗುತ್ತದೆ.
ಕೇಂದ್ರ ಸರ್ಕಾರದ ಈ ಕ್ರಮದ ಹಿನ್ನೆಲೆಯಲ್ಲಿ ಗ್ರಾಹಕರು ಔಷಧಿ ಅಥವಾ ಸೌಂದರ್ಯ ಉತ್ಪನ್ನಗಳನ್ನು ಖರೀದಿಸುವ ಮುನ್ನ ಅದರ ಸಂಯೋಜನೆ ಮತ್ತು ಅನುಮೋದನೆ ಕುರಿತು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಫಾರ್ಮಾ ಕಂಪನಿಗಳು ನಿಷೇಧಿತ ಉತ್ಪನ್ನಗಳ ಉತ್ಪಾದನೆ ನಿಲ್ಲಿಸಿ ಮಾರುಕಟ್ಟೆಯಲ್ಲಿರುವ ಸ್ಟಾಕ್‌ಗಳನ್ನು ಕೂಡ ತಕ್ಷಣ ಹಿಂಪಡೆಯಬೇಕಾಗಿದೆ.ಕಳೆದ ಕೆಲವು ತಿಂಗಳುಗಳಿಂದ ಕೇಂದ್ರ ಆರೋಗ್ಯ ಸಚಿವಾಲಯ ವೈಜ್ಞಾನಿಕ ಆಧಾರವಿಲ್ಲದ ಹಾಗೂ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದಾದ 50ಕ್ಕೂ ಹೆಚ್ಚು ಸಂಯೋಜಿತ ಔಷಧಿಗಳ ವಿರುದ್ಧ ಕ್ರಮ ಕೈಗೊಂಡಿದ್ದು, ಈ ನಿಷೇಧವೂ ಅದೇ ಸರಣಿಯ ಭಾಗವಾಗಿದೆ.







source https://suddione.com/centres-crackdown-on-aloe-vera-creams-nationwide-ban-on-16-pharmaceutical-beauty-products/

0 Comments
If u have any queries, Please let us know