ಜೈಲಿನಲ್ಲೇ ಲವ್ : ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಮದುವೆಯಾದ ಮಹಿಳಾ ಪೊಲೀಸ್ ಅಧಿಕಾರಿ

ಸುದ್ದಿಒನ್, ಭೋಪಾಲ್, ಮೇ.08: “ಪ್ರೀತಿಗೆ ಯಾವುದೇ ಗಡಿಗಳಿಲ್ಲ, ಜಾತಿ-ಧರ್ಮಗಳ ಹಂಗಿಲ್ಲ” ಎಂಬ ಮಾತನ್ನು ಮಧ್ಯಪ್ರದೇಶದ ಈ ಘಟನೆ ನಿಜವಾಗಿಸಿದೆ. ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಅಧಿಕಾರಿಯೊಬ್ಬರು, ಅದೇ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬಿಡುಗಡೆಯಾದ ವ್ಯಕ್ತಿಯನ್ನು ವರಿಸುವ ಮೂಲಕ ಹೊಸ ಸಂಚಲನ ಮೂಡಿಸಿದ್ದಾರೆ.

ಪರಿಚಯ ಪ್ರೇಮಕ್ಕೆ ತಿರುಗಿದ್ದು ಹೇಗೆ?

ಸತ್ನಾ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಜೈಲು ಅಧಿಕಾರಿಯಾಗಿ (ಡೆಪ್ಯುಟಿ ಜೈಲರ್) ಕಾರ್ಯನಿರ್ವಹಿಸುತ್ತಿರುವ ಫಿರೋಜಾ ಖಾತೂನ್, ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಧರ್ಮೇಂದ್ರ (ಅಭಿಲಾಶ್) ಎಂಬುವವರನ್ನು ಮದುವೆಯಾದವರು. ಧರ್ಮೇಂದ್ರ ಅವರು ಸುಮಾರು 14 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದು, 2020ರಲ್ಲಿ ಸನ್ನಡತೆಯ ಆಧಾರದ ಮೇಲೆ ಬಿಡುಗಡೆಯಾಗಿದ್ದರು. ಜೈಲಿನಲ್ಲಿ ಧರ್ಮೇಂದ್ರ ಇದ್ದ ಅವಧಿಯಲ್ಲೇ ಇಬ್ಬರ ನಡುವೆ ಪರಿಚಯ ಉಂಟಾಗಿ, ಅದು ಕಾಲಕ್ರಮೇಣ ಪ್ರೇಮಕ್ಕೆ ತಿರುಗಿತ್ತು.

ಹಿಂದೂ ಸಂಪ್ರದಾಯದಂತೆ ವಿವಾಹ

ಫಿರೋಜಾ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರೆ, ಧರ್ಮೇಂದ್ರ ಹಿಂದೂ ಧರ್ಮದವರಾಗಿದ್ದಾರೆ. ಧರ್ಮ ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ನಿಂತ ಈ ಜೋಡಿ, ಇತ್ತೀಚೆಗೆ ಲವ್ ಕುಶ್ ನಗರದಲ್ಲಿ ಹಿಂದೂ ಸಂಪ್ರದಾಯದಂತೆ ಅದ್ಧೂರಿಯಾಗಿ ವಿವಾಹವಾದರು. ಫಿರೋಜಾ ಅವರ ಕುಟುಂಬದವರು ಈ ಮದುವೆಗೆ ಪೂರ್ಣ ಸಮ್ಮತಿ ನೀಡದಿದ್ದರೂ, ಪರಸ್ಪರ ಒಪ್ಪಿಗೆಯಿಂದ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.



source https://suddione.com/love-in-prison-female-police-officer-marries-life-sentenced-prisoner/

Post a Comment

0 Comments