
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಅವರ ಪ್ರಯಾಣಕ್ಕೆ ಹವಾಮಾನ ವೈಪರೀತ್ಯ ಅಡ್ಡಿಯಾಗಿದೆ. ದೆಹಲಿಯಲ್ಲಿ ಉಂಟಾದ ಪ್ರತಿಕೂಲ ಹವಾಮಾನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ವಿಶೇಷ ವಿಮಾನವನ್ನು ಜೈಪುರಕ್ಕೆ ತಿರುಗಿಸಲಾಗಿದ್ದು, ಅಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ.
ರಾಜಕೀಯವಾಗಿ ಅತ್ಯಂತ ಮಹತ್ವದ ಈ ಪ್ರಯಾಣದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಕೂಡ ಜೊತೆಯಲ್ಲಿದ್ದರು. ಅವರೊಂದಿಗೆ ಸಚಿವರಾದ ಕೆ ಜೆ ಜಾರ್ಜ್, ಬೈರತಿ ಸುರೇಶ್, ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಸಹ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಸಿದ್ದರಾಮಯ್ಯ ರಾಜೀನಾಮೆ ಬಳಿಕ ಕಾಂಗ್ರೆಸ್ ಹೈಕಮಾಂಡ್ ಜೊತೆ ಮಹತ್ವದ ಮಾತುಕತೆ ನಡೆಸಲು ದೆಹಲಿಗೆ ತೆರಳುತ್ತಿದ್ದರು ಎನ್ನಲಾಗಿದ್ದು, ನಾಯಕತ್ವ ಬದಲಾವಣೆ, ಹೊಸ ಸಚಿವ ಸಂಪುಟ ರಚನೆ ಹಾಗೂ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯಬೇಕಿತ್ತು.
ಹವಾಮಾನ ವೈಪರೀತ್ಯದಿಂದ ವಿಮಾನ ಜೈಪುರದಲ್ಲಿ ತಾತ್ಕಾಲಿಕವಾಗಿ ಇಳಿದಿರುವುದರಿಂದ ದೆಹಲಿ ಸಭೆಗಳ ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇತ್ತ ಮುಖ್ಯಮಂತ್ರಿ ಸ್ಥಾನಕ್ಕೆ ಡಿ ಕೆ ಶಿವಕುಮಾರ್ ಹೆಸರು ಬಹುತೇಕ ಅಂತಿಮವಾಗಿರುವ ಹಿನ್ನೆಲೆ, ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಸರಣಿ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ.












source https://suddione.com/extreme-weather-effects-siddaramaiahs-special-plane-lands-in-jaipur/

0 Comments
If u have any queries, Please let us know