
ಸುದ್ದಿಒನ್,ನವದೆಹಲಿ,ಮೇ.22: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಉಗಾಂಡಾದಲ್ಲಿ ಎಬೋಲಾ ವೈರಸ್ ತೀವ್ರವಾಗಿ ಹರಡುತ್ತಿರುವುದನ್ನು ಗಮನಿಸಿ, ವಿಶ್ವ ಆರೋಗ್ಯ ಸಂಸ್ಥೆಯು (WHO) ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ (PHEIC) ಘೋಷಿಸಿದೆ. ಇದರ ಬೆನ್ನಲ್ಲೇ, ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತೀವ್ರ ನಿಗಾ ವಹಿಸುವಂತೆ ಹಾಗೂ ಆಸ್ಪತ್ರೆಗಳ ಸನ್ನದ್ಧತೆಯನ್ನು ಹೆಚ್ಚಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಈ ಕುರಿತು ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲಿಲಾ ಶ್ರೀವಾಸ್ತವ ಅವರು, “ಸದ್ಯಕ್ಕೆ ಆಫ್ರಿಕಾ ಖಂಡದ ಹೊರಗಿನ ದೇಶಗಳಿಗೆ ಎಬೋಲಾ ಹರಡುವ ಅಪಾಯ ಕಡಿಮೆ ಇದೆ. ಆದಾಗ್ಯೂ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಪ್ರಯಾಣ ಹೆಚ್ಚಿರುವುದರಿಂದ ನಾವು ಆರೋಗ್ಯ ವ್ಯವಸ್ಥೆಯ ಎಲ್ಲಾ ಹಂತಗಳಲ್ಲೂ ಸೂಕ್ತ ಸನ್ನದ್ಧತೆ ಹಾಗೂ ಸ್ಪಂದನಾ ಸಾಮರ್ಥ್ಯವನ್ನು ಹೊಂದುವುದು ಅತ್ಯಗತ್ಯ” ಎಂದು ತಿಳಿಸಿದ್ದಾರೆ.
ರಾಜ್ಯಗಳಿಗೆ ಕೇಂದ್ರ ನೀಡಿರುವ ಪ್ರಮುಖ ಸೂಚನೆಗಳು:
ಜ್ವರದ ಲಕ್ಷಣಗಳ ಮೇಲೆ ನಿಗಾ: ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ (IDSP) ಅಡಿಯಲ್ಲಿ ರಾಜ್ಯಗಳು ನಿಗಾವನ್ನು ತೀವ್ರಗೊಳಿಸಬೇಕು. ವಿಶೇಷವಾಗಿ ಎಬೋಲಾ ಪೀಡಿತ ದೇಶಗಳಿಂದ ಬಂದ ಪ್ರಯಾಣಿಕರಲ್ಲಿ ಅಸಾಮಾನ್ಯ ಜ್ವರ ಅಥವಾ ಎಬೋಲಾ ಲಕ್ಷಣಗಳು ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಬೇಕು.
ಪ್ರಮುಖ ಲಕ್ಷಣಗಳು: ಜ್ವರ, ನಿಶ್ಯಕ್ತಿ, ಸ್ನಾಯು ನೋವು, ತಲೆನೋವು, ಗಂಟಲು ನೋವು, ವಾಂತಿ, ಭೇದಿ, ಹೊಟ್ಟೆ ನೋವು, ಮೈಮೇಲೆ ದದ್ದುಗಳು ಮತ್ತು ಕಣ್ಣು ಕೆಂಪಾಗುವುದು ಎಬೋಲಾದ ಪ್ರಮುಖ ಲಕ್ಷಣಗಳಾಗಿವೆ.
ಪ್ರತ್ಯೇಕ ವಾರ್ಡ್ (ಐಸೊಲೇಶನ್) ವ್ಯವಸ್ಥೆ: ಶಂಕಿತ ರೋಗಿಗಳಿಗಾಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಐಸೊಲೇಶನ್ ವಾರ್ಡ್ಗಳನ್ನು ಗುರುತಿಸಬೇಕು. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಹೊಂದಿರುವ ಪ್ರತ್ಯೇಕ ಆಂಬ್ಯುಲೆನ್ಸ್ಗಳನ್ನು ಸಜ್ಜುಗೊಳಿಸಬೇಕು.
ಪಿಪಿಇ ಕಿಟ್ ಮತ್ತು ಸಿಬ್ಬಂದಿ: ತರಬೇತಿ ಪಡೆದ ಆರೋಗ್ಯ ಸಿಬ್ಬಂದಿ, ವೈಯಕ್ತಿಕ ರಕ್ಷಣಾ ಸಾಧನಗಳು (PPE ಕಿಟ್ಗಳು), ಅಗತ್ಯ ಲಾಜಿಸ್ಟಿಕ್ಸ್ ಮತ್ತು ತುರ್ತು ನಿಗಾ ಮೂಲಸೌಕರ್ಯಗಳು ಲಭ್ಯವಿರುವುದನ್ನು ರಾಜ್ಯಗಳು ಖಚಿತಪಡಿಸಿಕೊಳ್ಳಬೇಕು. ಶಂಕಿತ ಎಬೋಲಾ ಪ್ರಕರಣಗಳ ಮಾದರಿಗಳನ್ನು (Samples) ಪರೀಕ್ಷಿಸಲು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV Pune) ಸಂಪೂರ್ಣ ಸುಸಜ್ಜಿತವಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಐಸಿಎಂಆರ್ (ICMR) ನೆಟ್ವರ್ಕ್ನ ಮತ್ತಷ್ಟು ಪ್ರಯೋಗಾಲಯಗಳನ್ನು ಬಲಪಡಿಸಲಾಗುವುದು. ವಿಮಾನ ನಿಲ್ದಾಣ, ಬಂದರು ಆರೋಗ್ಯ ಅಧಿಕಾರಿಗಳು ಮತ್ತು ರಾಜ್ಯ ನಿಗಾ ಘಟಕಗಳ ನಡುವೆ ಉತ್ತಮ ಸಮನ್ವಯ ಇರಬೇಕೆಂದು ಅವರು ಸೂಚಿಸಿದ್ದಾರೆ.
ತರಬೇತಿ ಮತ್ತು ಜಾಗೃತಿ:
ಆಸ್ಪತ್ರೆಗಳಲ್ಲಿ ಸ್ವಚ್ಛತೆ, ಹ್ಯಾಂಡ್ ಹೈಜೀನ್ ಮತ್ತು ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಬೇಕು. ಆರೋಗ್ಯ ಕಾರ್ಯಕರ್ತರಿಗೆ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಮತ್ತು ಕಾಂಟ್ಯಾಕ್ಟ್ ಟ್ರೇಸಿಂಗ್ ಕುರಿತು ತರಬೇತಿ ನೀಡಬೇಕು. ಸಾರ್ವಜನಿಕರಲ್ಲಿ ವಿನಾಕಾರಣ ಆತಂಕ ಸೃಷ್ಟಿಯಾಗದಂತೆ ತಡೆಯಲು ಮತ್ತು ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ನಿಖರವಾದ ಮಾಹಿತಿಯನ್ನು ಪ್ರಸಾರ ಮಾಡಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ನಿರ್ದೇಶನ ನೀಡಿದೆ.









source https://suddione.com/ebola-scare-central-government-issues-alert-across-the-country/

0 Comments
If u have any queries, Please let us know