
ಸುದ್ದಿಒನ್,ನವದೆಹಲಿ,ಮೇ.19: ಇತ್ತೀಚೆಗಷ್ಟೇ ಹಾಲಿನ ದರ ಏರಿಕೆಯಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ ಈಗ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ. ಬೆಳಗ್ಗಿನ ತಿಂಡಿಗೆ ಅತಿ ಹೆಚ್ಚಾಗಿ ಬಳಸುವ ‘ಬ್ರೆಡ್’ ಬೆಲೆ ಈಗ ದಿಢೀರ್ ಆಗಿ ಏರಿಕೆಯಾಗಿದೆ.
ದೇಶದ ಪ್ರಮುಖ ಬ್ರೆಡ್ ಉತ್ಪಾದನಾ ಕಂಪನಿಗಳು ಪ್ರತಿ ಪ್ಯಾಕೆಟ್ಗೆ ಬರೋಬ್ಬರಿ ₹5 ರವರೆಗೆ ದರ ಹೆಚ್ಚಳ ಮಾಡಿವೆ. ಮಧ್ಯಮ ವರ್ಗ ಹಾಗೂ ದುಡಿಯುವ ವರ್ಗದ ಗ್ರಾಹಕರ ಜೇಬಿಗೆ ಈ ಬೆಲೆ ಏರಿಕೆ ನೇರವಾಗಿ ಕತ್ತರಿ ಹಾಕಿದೆ. ಬ್ರೆಡ್ ಮಾರುಕಟ್ಟೆಯಲ್ಲಿ ಇಷ್ಟು ದೊಡ್ಡ ಮಟ್ಟದ ಬೆಲೆ ಏರಿಕೆ ಕಂಡುಬಂದಿರುವುದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು ಎನ್ನಲಾಗಿದೆ.
ಬ್ರೆಡ್ ಮಾರುಕಟ್ಟೆಯ ದೈತ್ಯ ಬ್ರ್ಯಾಂಡ್ ಆಗಿರುವ ‘ಮಾಡರ್ನ್ ಬ್ರೆಡ್’ (Modern Bread) ತನ್ನ ಸಾಮಾನ್ಯ ಮತ್ತು ಪ್ರೀಮಿಯಂ ಕ್ವಾಲಿಟಿಯ ಬ್ರೆಡ್ಗಳ ಬೆಲೆಯನ್ನು ₹5 ರವರೆಗೆ ಹೆಚ್ಚಿಸಿದೆ. ಮಾಡರ್ನ್ ಸಂಸ್ಥೆಯ ಈ ನಿರ್ಧಾರದ ಬೆನ್ನಲ್ಲೇ, ಮಾರುಕಟ್ಟೆಯ ಇತರೆ ಜನಪ್ರಿಯ ಬ್ರ್ಯಾಂಡ್ಗಳಾದ ‘ಬ್ರಿಟಾನಿಯಾ’ (Britannia) ಮತ್ತು ‘ವಿಬ್ಸ್’ (Wibs) ಕೂಡ ತಮ್ಮ ಉತ್ಪನ್ನಗಳ ಬೆಲೆ ಹೆಚ್ಚಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿವೆ. ಅಂದರೆ, ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಬ್ರ್ಯಾಂಡ್ಗಳ ಬ್ರೆಡ್ಗಳೂ ದುಬಾರಿಯಾಗಲಿವೆ.
ಇಂದಿನಿಂದ ಹೊಸ ದರ ಪಟ್ಟಿ ಹೇಗಿದೆ?
ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದ ಪರಿಣಾಮವಾಗಿ ಮಾರುಕಟ್ಟೆ ಮತ್ತು ಬೇಕರಿಗಳಲ್ಲಿ ಬ್ರೆಡ್ ದರಗಳು ಬದಲಾಗಿವೆ. ಪ್ರಸ್ತುತ ಪರಿಷ್ಕೃತಗೊಂಡಿರುವ
ಹೊಸ ದರಗಳ ವಿವರ ಹೀಗಿದೆ:
ಸಾಮಾನ್ಯವಾಗಿ ಎಲ್ಲರೂ ಬಳಸುವ ಸಾಮಾನ್ಯ ಬಿಳಿ ಬ್ರೆಡ್ (White Bread) ಪ್ಯಾಕೆಟ್ ದರವು ₹30 ರಿಂದ ₹35 ಕ್ಕೆ ಏರಿಕೆಯಾಗಿದೆ. ಇನ್ನು ಆರೋಗ್ಯಕ್ಕೆ ಉತ್ತಮ ಎನ್ನಲಾಗುವ ಬ್ರೌನ್ ಬ್ರೆಡ್ (Brown Bread) ಬೆಲೆ ₹40 ರಷ್ಟಿದ್ದು, ಇನ್ನು ಮುಂದೆ ಅದು ಗ್ರಾಹಕರಿಗೆ ₹45 ಕ್ಕೆ ಸಿಗಲಿದೆ. ಅದೇ ರೀತಿ, ಶ್ರೀಮಂತ ಹಾಗೂ ಕಚೇರಿ ಉದ್ಯೋಗಿಗಳು ಹೆಚ್ಚಾಗಿ ಬಳಸುವ ಪ್ರೀಮಿಯಂ ಅಥವಾ ಸ್ಯಾಂಡ್ವಿಚ್ ಬ್ರೆಡ್ ಬೆಲೆಯು ₹45 ರಿಂದ ₹50 ಕ್ಕೆ ಹೆಚ್ಚಳವಾಗಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿರುವ ಮಲ್ಟಿಗ್ರೇನ್ ಬ್ರೆಡ್ ಪ್ಯಾಕೆಟ್ನ ಬೆಲೆಯೂ ಸಹ ₹50 ರಿಂದ ₹55 ಕ್ಕೆ ತಲುಪಿದೆ.
ಬ್ರೆಡ್ ಬೆಲೆ ದಿಢೀರ್ ಹೆಚ್ಚಾಗಲು ಕಾರಣವೇನು?
ಬೇಕರಿ ಮಾಲೀಕರು ಮತ್ತು ಮಾರುಕಟ್ಟೆ ತಜ್ಞರ ಪ್ರಕಾರ, ಬ್ರೆಡ್ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಬ್ರೆಡ್ ಉತ್ಪಾದನೆಗೆ ಮುಖ್ಯವಾಗಿ ಬೇಕಾಗುವ ಯೀಸ್ಟ್, ಪ್ರಿಸರ್ವೇಟಿವ್ಸ್ (ಸಂರಕ್ಷಕಗಳು) ಮತ್ತು ಉಪ್ಪಿನ ದರ ಹೆಚ್ಚಾಗಿದೆ. ಇದರೊಂದಿಗೆ ಬೇಕರಿಗಳಲ್ಲಿ ಬಳಸುವ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ದುಬಾರಿಯಾಗಿದೆ. ಉತ್ಪಾದನಾ ವೆಚ್ಚ ತೀವ್ರವಾಗಿ ಹೆಚ್ಚಾಗಿರುವುದರಿಂದ, ಬೆಲೆ ಏರಿಕೆ ಮಾಡದೆ ಬೇರೆ ದಾರಿಯಿಲ್ಲ ಎಂದು ಕಂಪನಿಗಳು ಹಾಗೂ ಬೇಕರಿ ಉದ್ಯಮಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.









source https://suddione.com/following-milk-bread-prices-also-skyrocket-another-price-hike-shocks-the-common-man/

0 Comments
If u have any queries, Please let us know