ನೀಟ್ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ : ಇನ್ನು ಈ ವಿಧಾನದಲ ಪರೀಕ್ಷೆ!

ನವದೆಹಲಿ : ವೈದ್ಯಕೀಯ ಶಿಕ್ಷಣ ಪ್ರವೇಶಾತಿಯ ಪ್ರಮುಖ ಪರೀಕ್ಷೆಯಾದ ನೀಟ್ (NEET-UG) ಪರೀಕ್ಷಾ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಘೋಷಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಆನ್‌ಲೈನ್ (CBT) ಮಾದರಿಯಲ್ಲಿ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಇದುವರೆಗೆ ಅಭ್ಯರ್ಥಿಗಳು ಪೆನ್ ಮತ್ತು ಪೇಪರ್ ಮೂಲಕ OMR ಶೀಟ್ ಭರ್ತಿ ಮಾಡಿ ಪರೀಕ್ಷೆ ಬರೆಯುತ್ತಿದ್ದರು. ಆದರೆ ಇನ್ನು ಮುಂದೆ ಸಂಪೂರ್ಣ ಡಿಜಿಟಲ್ ವಿಧಾನ ಜಾರಿಗೆ ಬರಲಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

2026ರ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿಬಂದ ಹಿನ್ನೆಲೆ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮೇ 3ರಂದು ನಡೆದಿದ್ದ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರದ್ದುಗೊಳಿಸಿತ್ತು. ನಂತರ ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಮರುಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಿಸಿರುವ ಮಾಹಿತಿಯಂತೆ, ನೀಟ್-ಯುಜಿ 2026 ಮರುಪರೀಕ್ಷೆ ಜೂನ್ 21, 2026ರಂದು ದೇಶಾದ್ಯಂತ ನಡೆಯಲಿದೆ. ಅಭ್ಯರ್ಥಿಗಳು ಮತ್ತೆ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.

ಪರೀಕ್ಷಾ ಪ್ರಕ್ರಿಯೆಯಲ್ಲಿ “ಶೂನ್ಯ ದೋಷ, ಶೂನ್ಯ ಸಹಿಷ್ಣುತೆ” ನೀತಿ ಅನುಸರಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದು, ಅರ್ಹ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಮುಂದಿನ ವರ್ಷದ ಆನ್‌ಲೈನ್ ಪರೀಕ್ಷೆಯ ತಾಂತ್ರಿಕ ವಿವರಗಳು, ಪರೀಕ್ಷಾ ದಿನಾಂಕ ಮತ್ತು ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಎನ್‌ಟಿಎ ಅಧಿಕೃತವಾಗಿ ಪ್ರಕಟಿಸಲಿದೆ ಎಂದು ತಿಳಿಸಲಾಗಿದೆ.



source https://suddione.com/significant-change-in-neet-exam-from-now-on-the-exam-will-be-conducted-in-this-manner/

Post a Comment

0 Comments