
ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದ ಕ್ರೂಸ್ ದುರಂತದ ಹಿನ್ನೆಲೆಯಲ್ಲಿ ತಾಯಿ–ಮಗುವಿನ ಹೃದಯವಿದ್ರಾವಕ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಗುವನ್ನು ಬಿಗಿಯಾಗಿ ಅಪ್ಪಿಕೊಂಡೇ ಅಮ್ಮ ಸಾವನ್ನಪ್ಪಿದ ಘಟನೆ ಎಂದು ಹೇಳಿಕೊಂಡು ಈ ಚಿತ್ರ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ದೃಶ್ಯವನ್ನು ನೋಡಿದ ಅನೇಕರು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.ಆದರೆ, ಈ ವೈರಲ್ ಫೋಟೋ ನಿಜವಾದ ಘಟನೆಗೆ ಸಂಬಂಧಿಸಿದ ಅಸಲಿ ಚಿತ್ರವಲ್ಲ ಎಂಬುದು ಫ್ಯಾಕ್ಟ್‌ಚೆಕ್‌ನಲ್ಲಿ ಬಹಿರಂಗವಾಗಿದೆ.
ಇದು ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದ ಚಿತ್ರವಾಗಿದ್ದು, ನೈಜ ಘಟನೆಯನ್ನು ಆಧರಿಸಿಕೊಂಡು ಭಾವನಾತ್ಮಕವಾಗಿ ಹೆಚ್ಚು ಪರಿಣಾಮ ಬೀರುವಂತೆ ರೂಪಿಸಲಾಗಿದೆ.ಇನ್ನೊಂದೆಡೆ, ಜಬಲ್‌ಪುರದ ಬಾರ್ಗಿ ಅಣೆಕಟ್ಟಿನಲ್ಲಿ ನಡೆದ ಕ್ರೂಸ್ ದುರಂತದಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದು, ಅವರಲ್ಲಿ ತಾಯಿ ಮತ್ತು ಮಗು ಕೂಡ ಸೇರಿದ್ದಾರೆ ಎಂಬುದು ದೃಢಪಟ್ಟಿದೆ. ದೋಣಿ ಮುಳುಗಿದ ವೇಳೆ ತಾಯಿ ತನ್ನ ಮಗುವನ್ನು ಮಡಿಲಲ್ಲಿ ಹಿಡಿದೇ ಕೊನೆಯುಸಿರು ಎಳೆದಿದ್ದ ಹೃದಯವಿದ್ರಾವಕ ಘಟನೆ ನಿಜಕ್ಕೂ ನಡೆದಿದೆ.

ಘಟನೆಯ ವಿವರಗಳ ಪ್ರಕಾರ, ಸಂಜೆ ಸುಮಾರಿಗೆ ಬಲವಾದ ಗಾಳಿ ಬೀಸುತ್ತಿದ್ದರೂ ಕ್ರೂಸ್‌ಗೆ ಪ್ರಯಾಣಿಕರನ್ನು ಸೇರಿಸಲಾಗಿತ್ತು. ದೋಣಿಯಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದು, ಕೇವಲ ಇಬ್ಬರು ಸಿಬ್ಬಂದಿ ಇದ್ದರು ಎನ್ನಲಾಗಿದೆ. ಗಾಳಿ ತೀವ್ರಗೊಂಡಾಗ ಪ್ರಯಾಣಿಕರು ದಡಕ್ಕೆ ಮರಳುವಂತೆ ಮನವಿ ಮಾಡಿದರೂ, ದೋಣಿ ದೂರದಲ್ಲಿದ್ದ ಕಾರಣ ತಕ್ಷಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ದುರಂತ ಸಂಭವಿಸಿದ ಬಳಿಕ ಸ್ಥಳೀಯರು ಹಗ್ಗಗಳ ಸಹಾಯದಿಂದ ಕೆಲವರನ್ನು ರಕ್ಷಿಸಿದರೂ, ಹಲವರು ನೀರಿನಲ್ಲಿ ಮುಳುಗಿದರು.
ಎಲ್ಲಾ ಪ್ರಯಾಣಿಕರಿಗೆ ಲೈಫ್ ಜಾಕೆಟ್ ಒದಗಿಸದೇ ಇದ್ದುದು ಮತ್ತು ಸುರಕ್ಷತಾ ಕ್ರಮಗಳ ಕೊರತೆ ದುರಂತದ ತೀವ್ರತೆಯನ್ನು ಹೆಚ್ಚಿಸಿದೆ ಎಂಬ ಆರೋಪ ಕೇಳಿಬಂದಿದೆ. ನಿಜವಾದ ದುರಂತವನ್ನು ಆಧರಿಸಿ ಎಐ ಮೂಲಕ ಸೃಷ್ಟಿಸಲಾದ ಚಿತ್ರವನ್ನು ತಪ್ಪು ಮಾಹಿತಿಯೊಂದಿಗೆ ಹಂಚಲಾಗುತ್ತಿರುವುದು ಬೆಳಕಿಗೆ ಬಂದಿದೆ. ಸಾರ್ವಜನಿಕರು ಇಂತಹ ವೈರಲ್ ಪೋಸ್ಟ್‌ಗಳನ್ನು ನಂಬುವ ಮೊದಲು ಪರಿಶೀಲನೆ ಮಾಡಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.













source https://suddione.com/the-truth-behind-the-viral-mother-child-photo-is-revealed/

0 Comments
If u have any queries, Please let us know