ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಸುದ್ದಿಒನ್

ವಿಶ್ವದಲ್ಲಿ ಅಂತರ್ಜಲದ ಸ್ಥಿತಿಯು ಅತ್ಯಂತ ಗಂಭೀರವಾಗಿದೆ ಮತ್ತು ಕಳವಳಕಾರಿಯಾಗಿದೆ. ಅತಿಯಾದ ಬಳಕೆ, ಮಾಲಿನ್ಯ ಮತ್ತು ಹವಾಮಾನ ವೈಪರೀತ್ಯಗಳಿಂದಾಗಿ ವಿಶ್ವದ ಸುಮಾರು 70%ರಷ್ಟು ಪ್ರಮುಖ ಜಲಧಾರೆಗಳು ದೀರ್ಘಾವಧಿಯ ಕುಸಿತವನ್ನು ಕಾಣುತ್ತಿದೆ. ವಿಶ್ವಸಂಸ್ಥೆಯ (UN) ಇತ್ತೀಚಿನ ವರದಿಗಳ ಪ್ರಕಾರ ಭೂಮಿಯ “ಜಾಗತಿಕ ಜಲ ದಿವಾಳಿತನ” ಎಂಬ ಹೊಸಯುಗವನ್ನು ಪ್ರವೇಶಿಸಿದೆ.
ವಿಶ್ವದ ಅಂತರ್ಜಲದ ಪ್ರಸ್ತುತ ಸ್ಥಿತಿಯ ವಿವರಗಳನ್ನು ತಿಳಿಯವುದಾದರೆ, ಜಾಗತಿಕವಾಗಿ ಸುಮಾರು 50% ರಷ್ಟು ಜನಸಂಖ್ಯೆಗೆ ಕುಡಿಯುವ ನೀರು ಅಂತರ್ಜಲ ಮೂಲದಿಂದಲೇ ದೊರೆಯುತ್ತದೆ. ಪ್ರಪಂಚದಾದ್ಯಂತ ಕೃಷಿ ಚಟುವಟಿಕೆಗಳಿಗೆ ಬಳಸುವ ನೀರಿನಲ್ಲಿ 40% ಕ್ಕಿಂತ ಹೆಚ್ಚು ನೀರು ಅಂತರ್ಜಲದಿಂದ ಬರುತ್ತದೆ. ಕೈಗಾರಿಕೆಗಳು ತಮ್ಮ ನೀರಿನ ಅಗತ್ಯಕ್ಕಾಗಿ ಅಂತರ್ಜಲವನ್ನು ಹೆಚ್ಚು ಅವಲಂಬಿಸಿವೆ. ಮಳೆ ಮೂಲಕ ಭೂಮಿಗೆ ಸೇರುವ ನೀರಿಗಿಂತ, ಕೊಳವೆ ಬಾವಿ ಹಾಗೂ ಬಾವಿಗಳ ಮೂಲಕ ಹೊರತೆತೆಯುವ ನೀರಿನ ಪ್ರಮಾಣವೇ ಹೆಚ್ಚಾಗಿದೆ. ಭಾರತ, ಅಮೇರಿಕ, ಚೀನಾ ಮತ್ತು ಪಶ್ಚಿಮ ಏಷ್ಯಾದ ದೇಶಗಳಲ್ಲಿ ಕೃಷಿ ಮತ್ತು ಕೈಗಾರಿಕೆಗಳಿಗಾಗಿ ನೀರನ್ನು ಮಿತಿಮೀರಿ ಬಳಸಲಾಗುತ್ತಿದೆ.
ಜಾಗತಿಕ ತಾಪಮಾನ ಏರಿಕೆಯಿಂದಾಗಿ ಭೂಮಿಯ ಮೇಲ್ಮೈಯಲ್ಲಿ ತೇವಾಂಶ ಕಡಿಮೆಯಾಗುತ್ತಿದೆ. ಮಳೆ ಬಿದ್ದರೂ ಅದು ನಿಧಾನವಾಗಿ ಇಂಗಿ ಅಂತರ್ಜಲ ಮರುಪೂರಣಗೊಳ್ಳುವ ಬದಲು ವೇಗವಾಗಿ ಪ್ರವಾಹದ ರೂಪದಲ್ಲಿ ಹರಿದು ಹೋಗುತ್ತದೆ. ಕೈಗಾರಿಕಾ ತ್ರಾಜ್ಯ ಕೃಷಿಯಲ್ಲಿ ಬಳಸುವ ರಸಾಯನಿಕಗಳು ಮತ್ತು ಕೀಟನಾಶಕಗಳು ಭೂಮಿಯೊಳಗೆ ಸೇರಿ ಅಂತರ್ಜಲವನ್ನು ಕುಡಿಯಲು ಯೋಗ್ಯವಲ್ಲದಂತೆ ಮಾಡುತ್ತಿವೆ. ಇತರೆ ದೇಶಗಳಾದ ಅಫ್ಘಾನಿಸ್ಥಾನ, ಮೆಕ್ಸಿಕೋ, ಇರಾನ್, ಮೊರಾನ್, ಮೊರಾಕೋ, ಸೌದಿ ಅರೇಬಿಯಾ ಮತ್ತು ಅಮೇರಿಕದ ನೈರುತ್ಯ ಭಾಗಗಳಲ್ಲಿ ಅಂತರ್ಜಲದ ಮಟ್ಟವು ತೀವ್ರಗತಿಯಲ್ಲಿ ಕಡಿಮೆಯಾಗುತ್ತಿದೆ.
ಅಂತರ್ಜಲದ ಕುಸಿತದಿಂದ ವಿಶ್ವದ ಪ್ರಮುಖ ಆಹಾರ ಧಾನ್ಯಗಳು ಭದ್ರತೆಗೆ ದಕ್ಕೆಯಾಗುವಂತಹ ಗಂಭೀರ ಪರಿಣಾಮಗಳು ಉಂಟಾಗುತ್ತದೆ. ಮಣ್ಣಿನ ಆಳದಲ್ಲಿರುವ ಜಲಚರಗಳು(Aquifer) ಖಾಲಿಯಾದಾಗ ಮಣ್ಣಿನ ಪದರಗಳು ಕುಸಿದು ಭೂಮಿಯ ಮೇಲ್ಮೈ ಕುಸಿತ ಉಂಟಾಗುತ್ತದೆ. ಅಂತರ್ಜಲದ ಮಟ್ಟಕುಸಿದಾಗ ನೀರಿನ ಪ್ರಮಾಣ ಕಡಿಮೆಯಾಗಿ ಜಲಚರಗಳು ಹಾಗೂ ವನ್ಯ ಜೀವಿಗಳು, ಅವಾಸಸ್ಥಾನ ನಾಶವಾಗುತ್ತದೆ.
ಅಂತರ್ಜಲದ ಮಟ್ಟಕುಸಿಯುತ್ತಿರುವುದು ಜಾಗತಿಕ ಮಟ್ಟದಲ್ಲಿ ಒಂದು ಗಂಭೀರ ಸಮಸ್ಯೆಯಾಗಿದೆ. ಮಳೆ ನೀರು ಇಂಗುವಿಕೆ, ಮಿತಬಳಕೆ ಮತ್ತು ಜಲಾನಯನ ನಿರ್ವಹಣೆಯಂತಹ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಂತರ್ಜಲದ ಸವಳಿಕೆಯನ್ನು ತಡೆಗಟ್ಟಬಹುದು. ವಿಶ್ವದಲ್ಲಿ ಮತ್ತು ನಮ್ಮ ಸ್ಥಳೀಯ ಪ್ರದೇಶವಾದ ಚಿತ್ರದುರ್ಗದಂತಹ ಒಣ ಪ್ರದೇಶಗಳಲ್ಲಿ ಅಂತರ್ಜಲವನ್ನು ರಕ್ಷಿಸುವುದು ಪ್ರತಿಯೊಬ್ಬರ ಹೊಣೆಯಾಗಿದೆ.












source https://suddione.com/global-water-bankruptcy-earths-aquifers-are-drying-up-groundwater-levels-have-dropped-by-70/


0 Comments
If u have any queries, Please let us know