ಎಸ್‌ಬಿಐ ಗ್ರಾಹಕರಿಗೆ ಎಚ್ಚರಿಕೆ: 6 ದಿನ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಸಾಧ್ಯ

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ State Bank of India (ಎಸ್‌ಬಿಐ) ಶಾಖೆಗಳು ದೇಶದ ಹಲವೆಡೆ ಸತತ 5 ರಿಂದ 6 ದಿನಗಳ ಕಾಲ ಕಾರ್ಯಾಚರಣೆಯಲ್ಲಿ ವ್ಯತ್ಯಯ ಕಾಣುವ ಸಾಧ್ಯತೆ ಇದೆ. ಮೇ 23ರಿಂದ 28ರವರೆಗೆ ವಿವಿಧ ಕಾರಣಗಳಿಂದ ಬ್ಯಾಂಕಿಂಗ್ ಸೇವೆಗಳು ಭಾಗಶಃ ಸ್ಥಗಿತವಾಗಲಿವೆ.

ಮೇ 25 ಮತ್ತು 26ರಂದು ಎಸ್‌ಬಿಐ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಸೋಮವಾರ ಮತ್ತು ಮಂಗಳವಾರ ಬ್ಯಾಂಕ್ ಸೇವೆಗಳು ಬಹುತೇಕ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಇದಾದ ಬಳಿಕ ಮೇ 27 ಮತ್ತು 28ರಂದು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ರಜೆ ಘೋಷಿಸಲಾಗಿದೆ. ಕೆಲವೆಡೆ ಮೇ 27ರಂದು, ಇನ್ನೂ ಕೆಲವು ಪ್ರದೇಶಗಳಲ್ಲಿ ಮೇ 28ರಂದು ರಜೆ ಇರುವುದರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಹಿನ್ನೆಲೆಯಲ್ಲಿ ಗ್ರಾಹಕರು ಹಣ ವರ್ಗಾವಣೆ, ಚೆಕ್ ಕ್ಲಿಯರೆನ್ಸ್‌, ನಗದು ಠೇವಣಿ ಹಾಗೂ ಇತರೆ ಶಾಖಾ ವಹಿವಾಟುಗಳನ್ನು ಮುಂಚಿತವಾಗಿ ಪೂರ್ಣಗೊಳಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ಎಟಿಎಂಗಳಿಗೆ ಸಮಯಕ್ಕೆ ಹಣ ಭರ್ತಿ ಆಗದಿದ್ದರೆ ನಗದು ಹಿಂಪಡೆಯಲು ಸಮಸ್ಯೆಯಾಗುವ ಸಾಧ್ಯತೆಯೂ ಇದೆ. ಆದರೆ ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ ಯುಪಿಐ ಸೇರಿದಂತೆ ಆನ್‌ಲೈನ್ ಸೇವೆಗಳು ಎಂದಿನಂತೆ ಲಭ್ಯವಿರಲಿವೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.



source https://suddione.com/sbi-warns-customers-banking-services-may-be-disrupted-for-6-days/

Post a Comment

0 Comments