ಟೋಕಿಯೋ, ಮಾರ್ಚ್ 19 : ಜನಪ್ರಿಯ ಅನಿಮೇಷನ್ ಸರಣಿ Doraemonಗೆ ವಿಶಿಷ್ಟ ಗುರುತು ತಂದ ಖ್ಯಾತ ನಿರ್ದೇಶಕ ಸುತೊಮು ಶಿಬಯಾಮಾ(84) ನಿಧನರಾಗಿದ್ದಾರೆ. ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಮಾರ್ಚ್ 6ರಂದು ನಿಧನ ಹೊಂದಿದ್ದು, ಈ ವಿಷಯವನ್ನು ಮಾರ್ಚ್ 17ರಂದು ಅಜಿಯಾ-ಡೊ ಅನಿಮೇಷನ್ ವರ್ಕ್ಸ್ ಅಧಿಕೃತವಾಗಿ ಪ್ರಕಟಿಸಿದೆ.
ಸುಮಾರು ಎರಡು ದಶಕಗಳ ಕಾಲ ಡೋರೆಮಾನ್ ಸರಣಿಯನ್ನು ಮುನ್ನಡೆಸಿದ ಶಿಬಯಾಮಾ, ಈ ಅನಿಮೇಷನ್‌ಗೆ ಅಪಾರ ಕೊಡುಗೆ ನೀಡಿದ ವ್ಯಕ್ತಿಯಾಗಿದ್ದಾರೆ. 1979ರಲ್ಲಿ ಆರಂಭವಾದ ಡೋರೆಮಾನ್ ಟಿವಿ ಸರಣಿಗೆ ಅವರು ನಿರ್ದೇಶನ ನೀಡಿದ್ದು, ನಂತರ ಫ್ರಾಂಚೈಸಿಯ 22ಕ್ಕೂ ಹೆಚ್ಚು ಫೀಚರ್ ಚಿತ್ರಗಳಿಗೆ ನಾಯಕತ್ವ ವಹಿಸಿದ್ದರು.
ಜಪಾನ್‌ನ ಅನಿಮೇಷನ್ ಕ್ಷೇತ್ರದಲ್ಲಿ “ಪಿತಾಮಹ” ಎಂದು ಕರೆಯಲ್ಪಡುವ ಶಿಬಯಾಮಾ, 1963ರಲ್ಲಿ ಟೋಯಿ ಅನಿಮೇಷನ್‌ನಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದರು. ಬಳಿಕ ಶಿನ್-ಐ ಅನಿಮೇಷನ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅವರು, ಮಾರುಕೊ-ಚಾನ್, ಲುಪಿನ್ III ಮತ್ತು ಕೈಕೆತ್ಸು ಜೊರೊರಿ ಸೇರಿದಂತೆ ಹಲವು ಜನಪ್ರಿಯ ಕೃತಿಗಳಲ್ಲೂ ತಮ್ಮ ಛಾಪು ಮೂಡಿಸಿದರು.1978ರಲ್ಲಿ ಸಹ ನಿರ್ದೇಶಕರಾದ ಒಸಾಮು ಕೊಬಯಾಶಿ ಮತ್ತು ಮಿಚಿಶಿರೊ ಯಮಡಾ ಅವರೊಂದಿಗೆ ಸೇರಿ ಅಜಿಯಾ-ಡೊ ಅನಿಮೇಷನ್ ವರ್ಕ್ಸ್ ಸಂಸ್ಥೆಯನ್ನು ಸ್ಥಾಪಿಸಿದರು.
ಅವರ ದೀರ್ಘಕಾಲದ ಸಾಧನೆಯನ್ನು ಗುರುತಿಸಿ 2012ರಲ್ಲಿ ಜಪಾನ್ ಸರ್ಕಾರದಿಂದ ಲೈಫ್‌ಟೈಮ್ ಅಚೀವ್‌ಮೆಂಟ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಕುಟುಂಬದ ಇಚ್ಛೆಯಂತೆ ಅಂತ್ಯಕ್ರಿಯೆಯನ್ನು ಖಾಸಗಿಯಾಗಿ ನೆರವೇರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸ್ಮರಣಾ ಕಾರ್ಯಕ್ರಮ ಆಯೋಜಿಸುವ ಸಾಧ್ಯತೆ ಇದೆ.ಒಟ್ಟಾರೆ, ಶಿಬಯಾಮಾ ಅವರ ನಿಧನ ಅನಿಮೇಷನ್ ಜಗತ್ತಿಗೆ ತುಂಬಲಾರದ ನಷ್ಟವೆಂದು ಅಭಿಪ್ರಾಯ ವ್ಯಕ್ತವಾಗಿದೆ.






source https://suddione.com/doraemon-director-passes-away/


0 Comments
If u have any queries, Please let us know